ಧಾರವಾಡ : ನಗರ ಹಾಗೂ ಗ್ರಾಮೀಣ ಭಾಗದ ಕುಶಲಕರ್ಮಿಗಳ ಉದ್ಯೋಗ ಹೆಚ್ಚಿಸಲು ಮತ್ತು ಉತ್ಪನ್ನ ಹೆಚ್ಚಿಸಲು ಕೇಂದ್ರ ಸರ್ಕಾರವು ಪಿ.ಎಂ. ವಿಶ್ವಕರ್ಮ ಎಂಬ ಹೊಸ ಯೋಜನೆ ಜಾರಿಗೊಳಿಸಿದ್ದು, ಜಿಲ್ಲೆಯ ವಿವಿಧ ಗುಡಿ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳು ಪಿ.ಎಂ. ವಿಶ್ವಕರ್ಮ ಯೋಜನೆಗೆ ಆನ್‍ಲೈನ್ ಮೂಲಕ ನೊಂದಾಯಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಹೇಳಿದರು.
ಅವರು ಇಂದು, ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಕಾರ್ಯದರ್ಶಿಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಆಯೋಜಿಸಿದ್ದ ಪಿ.ಎಂ. ವಿಶ್ವಕರ್ಮ ನೂತನ ಯೋಜನೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಹೊಸ ಯೋಜನೆಯಾದ ಪಿ.ಎಂ. ವಿಶ್ವಕರ್ಮ ಯೋಜನೆಯಡಿಯಲ್ಲಿ ಒಂದು ಲಕ್ಷದವರೆಗೆ ಶೇ.5 ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ ಮತ್ತು 15 ಸಾವಿರ ರೂಪಾಯಿಯ ಉಚಿತ ಟೂಲ್ ಕಿಟ್ ನೀಡಲಾಗುತ್ತದೆ. ಭಾರತೀಯ ಆರ್ಥಿಕತೆಯು ಹಲವಾರು ಕುಶಲಕರ್ಮಿಗಳನ್ನು ಒಳಗೊಂಡಿದೆ ಕಮ್ಮಾರರು, ಅಕ್ಕಸಾಲಿಗ, ಕುಂಬಾರರು, ಬಡಗಿಗರು, ಶಿಲ್ಪಿಗಳು ಮುಂತಾದ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ ಅಂತಹ ಅರ್ಹ ಕುಶಲಕರ್ಮಿಗಳನ್ನು ಗುರುತಿಸಿ ಆಯ್ಕೆ ಮಾಡಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಅವರು ತಿಳಿಸಿದರು.
ಪಿ.ಎಂ. ವಿಶ್ವಕರ್ಮ ಯೋಜನೆಯಲ್ಲಿ 18 ಚಟುವಟಿಕೆಳನ್ನು ಗುರುತಿಸಲಾಗಿದೆ, ಒಂದು ವೇಳೆ ಇದರಲ್ಲಿ ಇಲ್ಲದ ಚಟುವಟಿಕೆಗಳು ಇದ್ದರೆ, ರಾಜ್ಯ ಮಟ್ಟದ ಆಯ್ಕೆ ಸಮಿತಿ ಗಮನಕ್ಕೆ ತರಲಾಗುವುದು. 18 ವರ್ಷ ಮೇಲ್ಪಟ್ಟವರು ಈ ಯೋಜನೆಗೆ ನೋಂದಣಿಯನ್ನು ಮಾಡಿಕೊಳ್ಳಬಹುದು, ಒಂದು ಕುಟುಂಬಕ್ಕೆ ಒಬ್ಬರನ್ನು ಮಾತ್ರ ಅರ್ಹರೆಂದು ಆಯ್ಕೆ ಮಾಡಲಾಗುತ್ತದೆ. ಸರ್ಕಾರಿ ನೌಕರರ ಕುಟುಂಬಗಳು ಈ ಯೋಜನೆಗೆ ಅನರ್ಹರಾಗಿರುತ್ತಾರೆ. ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ ಅವರು ಉಪಸ್ಥಿತರಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹೊಸಮನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಡಾ. ಭೀಮಪ್ಪ ಎಂ.ಎನ್. ಅವರು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓಗಳ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.