ಬಳ್ಳಾರಿ: ಜಿಲ್ಲಾಡಳಿತದ ವತಿಯಿಂದ ನ.30ರಂದು ಕನಕದಾಸ ಜಯಂತಿಯನ್ನು ಅಚ್ಚುಕಟ್ಟಾಗಿ ಆಚರಿಸಲು ಎಲ್ಲ ರೀತಿಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ ಅವರು ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನ.30ರಂದು ಬೆಳಗ್ಗೆ 9ಕ್ಕೆ ನಗರದ ಕುಮಾರಸ್ವಾಮಿ ದೇವಸ್ಥಾನ ಹತ್ತಿರದ ದಾಸಶ್ರೇಷ್ಠ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕನಕದಾಸರ ಭಾವಚಿತ್ರದೊಂದಿಗೆ ಎಸ್‍ಪಿ ವೃತ್ತದಿಂದ ದುರ್ಗಮ್ಮ ಗುಡಿಯ ಮೂಲಕ ರಾಯಲ್ ವೃತ್ತದಿಂದ ರಾಘವ ಕಲಾಮಂದಿರದ ವೇದಿಕೆಯವರೆಗೆ ಮೆರವಣಿಗೆ ಜರುಗುತ್ತದೆ ಹಾಗೂ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳನ್ನು ನಿಯೋಜಿಸಬೇಕು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಶ್ರೇಷ್ಠ ಕನಕದಾಸರ ಕುರಿತು ವಿಶೇಷ ಉಪನ್ಯಾಸವನ್ನು ಏರ್ಪಡಿಸಬೇಕು ಎಂದರು. ಜಯಂತಿ ಕಾರ್ಯಕ್ರಮಗಳಲ್ಲಿ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಮತ್ತು ಸಾರ್ವಜನಿಕರು ಸ್ವ-ಇಚ್ಛೆಯಿಂದ ಭಾಗವಹಿಸುವಂತೆ ಸೂಚನೆ ನೀಡಿದರು. ವಿವಿಧ ಇಲಾಖೆಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಆಯುಕ್ತ ಜಿ.ಖಲೀಲ್ ಸಾಬ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೋನ್ನುರಪ್ಪ, ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.