ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಸಂಬಂಧ ಭಾರತ ಚುನಾವಣಾ ಆಯೋಗವು ರಾಜ್ಯ ಮತ್ತು ಜಿಲ್ಲಾ ಮಟ್ಟದ ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ಪ್ರಸಾರ ಮಾಡಲು ದರಪಟ್ಟಿ ನಿಗಧಿಪಡಿಸಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಟಿ.ವಿ., ರೇಡಿಯೋ ವಾಹಿನಿ, ಸೋಷಿಯಲ್ ಮೀಡಿಯಾ, ಇಂಟರ್ನೆಟ್, ವೆಬ್‌ಸೈಟ್‌ಗಳಲ್ಲಿ ಜಾಹೀರಾತು ದರ ನಿಗದಿ ಸಂಬಂಧ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣಾ ಕೆಲಸ ಕಾರ್ಯಗಳ ಪೂರ್ವಸಿದ್ದತೆ ಕೈಗೊಳ್ಳಲಾಗುತ್ತಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ವಿವಿಧ ಮಾಧ್ಯಮಗಳಾದ ಟಿ.ವಿ, ರೇಡಿಯೋ ವಾಹಿನಿ, ಸೋಷಿಯಲ್ ಮೀಡಿಯಾ, ಇಂಟರ್ನೆಟ್, ವೆಬ್‌ಸೈಟ್‌ಗಳ ಮೂಲಕ ರಾಜಕೀಯ ಪಕ್ಷಗಳು ಜಾಹೀರಾತು ನೀಡಲು ಭಾರತ ಚುನಾವಣಾ ಆಯೋಗವು ವಿವಿಧ ಅಳತೆಯ ಬ್ಯಾನರ್‍ಗಳು, ಡಿಸ್‌ಪ್ಲೇ, ಫಿಕ್ಸೆಡ್ ಡಿಸ್‌ಪ್ಲೇ, ವೀಡಿಯೋ ಮೂಲಕ ಪ್ರಸಾರ ಕೈಗೊಳ್ಳಲು ದರ ನಿಗಧಿಪಡಿಸಿದೆ ಎಂದರು. ವಿವಿಧ ಜಾಹೀರಾತುಗಳಿಗಾಗಿ ದರ ನಿಗಧಿಪಡಿಸಿರುವ ವಿವರಗಳ ಮಾಹಿತಿಯನ್ನು ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸವಿವರವಾಗಿ ವಿವರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿಯವರು ಆಯೋಗದ ಮುಖ್ಯ ಚುನಾವಣಾಧಿಕಾರಿಯವರ ನಿರ್ದೇಶನದಂತೆ ರಾಜ್ಯಮಟ್ಟದ ದರಪಟ್ಟಿಯಲ್ಲಿ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮೀಡಿಯಾ ಹೊರತುಪಡಿಸಿ, ಜಿಲ್ಲಾ ಮಟ್ಟದಲ್ಲಿ ಮಾಧ್ಯಮಗಳ ಜಾಹೀರಾತು ದರದ ವಿವರವನ್ನು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಸಲ್ಲಿಸಿರುವ ದರಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಮಾಧ್ಯಮ ಪಟ್ಟಿಯಲ್ಲಿರುವ ರಾಜ್ಯಮಟ್ಟದ ದಿನಪತ್ರಿಕೆಗಳಿಗೆ ಇಲಾಖೆಯು ನಿಗಧಿಪಡಿಸಿರುವ ಜಾಹೀರಾತು ದರ, ವಾಣಿಜ್ಯ ಜಾಹೀರಾತು ದರ, ಪ್ರಾದೇಶಿಕ ದಿನಪತ್ರಿಕೆಗಳಿಗೆ ಇಲಾಖೆ ನಿಗಧಿಪಡಿಸಿರುವ ದರ, ಪ್ರಾದೇಶಿಕ ದಿನಪತ್ರಿಕೆಗಳು ನೀಡಿರುವ ವಾಣಿಜ್ಯ ಜಾಹೀರಾತು ದರ, ಟಿ.ವಿ.ಗಳಿಗೆ ಇಲಾಖೆಯು ನಿಗಧಿಪಡಿಸಿರುವ ಜಾಹೀರಾತು ದರ, ಟಿ.ವಿ.ಗಳು ನೀಡಿರುವ ವಾಣಿಜ್ಯ ದರ, ರೇಡಿಯೋ ವಾಹಿನಿಗಳಿಗೆ ಇಲಾಖೆಯು ನೀಡುತ್ತಿರುವ ದರಪಟ್ಟಿ, ಮಾಧ್ಯಮ ಪಟ್ಟಿಯಲ್ಲಿರುವ ಎಲ್ಲಾ ಜಿಲ್ಲಾಮಟ್ಟದ ದಿನಪತ್ರಿಕೆಗಳಿಗೆ ಇಲಾಖೆ ನಿಗಧಿಪಡಿಸಿರುವ ಜಾಹೀರಾತು ದರದ ಅನುಬಂಧ-೧ ರಿಂದ ೮ ರಲ್ಲಿನ ಪಟ್ಟಿ ಮತ್ತು ಜಿಲ್ಲೆಯ ಚಿಗುರು ಹಾಗೂ ಶ್ರೀ ಟಿ.ವಿ.ಗಳು ನೀಡಿರುವ ಪ್ಲ್ಯಾಶ್ ಸ್ಕ್ರಾಲಿನ್, ಸಿಂಗಲ್‌ಲೈನ್ ಸ್ಕ್ರಾಲ್ ಜಾಹೀರಾತುಗಳ ವಿವರ, ಕ್ರೋಢೀಕೃತ ಜಿಲ್ಲಾ ಮಟ್ಟದ ದರಪಟ್ಟಿಯನ್ನು ಅಂತಿಮಗೊಳಿಸಿ ಪ್ರಚುರಪಡಿಸಲಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಇದೇ ವೇಳೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮಾತನಾಡಿ ಆಯೋಗವು ಚುನಾವಣಾ ಪ್ರಚಾರ ಸಾಮಾಗ್ರಿಗಳಿಗೆ ನಿಗಧಿಪಡಿಸುವ ದರ ಅತ್ಯಂತ ಹೆಚ್ಚಾಗಿದ್ದು, ಇದಕ್ಕಿಂತ ಕಡಿಮೆ ದರಕ್ಕೆ ಸಂಬಂಧಿಸಿದ ಸಾಮಾಗ್ರಿಗಳ ಸರಬರಾಜು ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡು, ಕಡಿಮೆ ದರಕ್ಕೆ ಪಡೆಯುತ್ತೇವೆ. ಚುನಾವಣಾ ಆಯೋಗವು ನಿಗಧಿಪಡಿಸಿರುವ ದರವನ್ನು ಪರಿಗಣಿಸಿದರೆ ಅಭ್ಯರ್ಥಿಗೆ ಹೆಚ್ಚಿನ ಹೊರೆಯಾಗುತ್ತದೆ ಎಂದು ತಿಳಿಸಿದರು. ಚುನಾವಣಾ ಶಿರಸ್ತೇದಾರ್ ಎಸ್. ಬಸವರಾಜು, ರಾಜಕೀಯ ಪಕ್ಷಗಳ ಮುಖಂಡರಾದ ಎ.ಹೆಚ್. ನಜ್ರುಲ್ಲಾ ಖಾನ್, ಎಸ್. ಬಾಲಸುಬ್ರಹ್ಮಣ್ಯ, ಎನ್. ನಾಗಯ್ಯ, ಕೆ. ಹರೀಶ್ ಸಭೆಯಲ್ಲಿ ಉಪಸ್ಥಿತರಿದ್ದರು.