ಹನಗೋಡು: ಹುಣಸೂರು ಮುಖ್ಯ ರಸ್ತೆಯ ಹನಗೋಡಿನ ಅಣ್ಣೆಗೆರೆ ಕೆರೆ ಕಡೆಯಿಂದ ಸೋಮಪ್ಪ ಅವರ ತೋಟದ ಮೂಲಕ ಹಾದು ಕುಂಟೇರಿ ಕೆರೆ ಕಡೆಗೆ ಹುಲಿ ಹೋಗಿರುವ ಹೆಜ್ಜೆ ಗುರುತು ಪತ್ತೆಯಾಗಿದೆ. ವಿಷಯ ತಿಳಿದು, ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ವಲಯದ ಹುಣಸೂರು ಆರ್. ಎಫ್.ಒ. ಸುಬ್ರಹ್ಮಣ್ಯ ನೇತೃತ್ವದ ತಂಡ ಪರಿಶೀಲಿಸಿ, ಇದು ಹುಲಿ ಹೆಜ್ಜೆ ಎಂದು ಖಾತರಿ ಪಡಿಸಿದೆ.
ಈ ವೇಳೆ ಗ್ರಾಮಸ್ಥರು ಈ ಭಾಗದ ಜಮೀನು ಹಾಗೂ ಹಳ್ಳಿಗಳ ಹಲವೆಡೆ ಹುಲಿ ಹೆಜ್ಜೆ ಕಳೆದ ವ?ದಿಂದಲೂ ಕಾಣಿಸಿಕೊಳ್ಳುತ್ತಿದ್ದು, ಶೀಘ್ರ ಸೆರೆ ಹಿಡಿಯಬೇಕೆಂದು ಮನವಿ ಮಾಡಿದರು.
ಒಂಟಿಯಾಗಿ ಒಬ್ಬೊಬ್ಬರೇ ಓಡಾಡಬೇಡಿ; ಬೀರತಮ್ನನಹಳ್ಳಿ ಮೀಸಲು ಅರಣ್ಯದ ಬಿ.ಆರ್. ಕಾವಲ್ ಕಡೆಯಿಂದ ಹುಲಿ ಸಂಚರಿಸಿರುವ ಹೆಜ್ಜೆ ಪತ್ತೆಯಾಗಿರುವುದರಿಂದ ಹುಣಸೂರು ಮತ್ತು ವೀರನಹೊಸಹಳ್ಳಿ ವಲಯದ ಅರಣ್ಯ ಸಿಬ್ಬಂದಿಗಳು ಕೂಂಬಿಂಗ್ ನಡೆಸಿದ್ದಾರೆ. ಹುಲಿ ಹೆಜ್ಜೆ ಪತ್ತೆಯಾಗಿರುವುದರಿಂದ ಈ ಭಾಗದಲ್ಲಿ ಒಬ್ಬೊಬ್ಬರೇ ತಿರುಗಾಡಬೇಡಿ. ಜಮೀನು ಕೆಲಸಕ್ಕೆ ಹೋಗಬೇಕಾದಲ್ಲಿ ಜತೆಯಲ್ಲೇ ಹೋಗಿ ಎಂದು ಪ್ರಚಾರ ಮಾಡಲಾಗಿದೆ, ಎಂದು ಆರ್.ಎಫ್.ಒ. ಸುಬ್ರಹ್ಮಣ್ಯ ತಿಳಿಸಿದ್ದಾರೆ.
