Sunday, April 20, 2025
Google search engine

Homeರಾಜ್ಯಸುದ್ದಿಜಾಲಕನ್ನಡ ಭಾಷೆಯೆಂದರೆ ಭಾವೈಕ್ಯತೆಯ ಸಂಕೇತ : ಸಾಹಿತಿ ಬನ್ನೂರು ರಾಜು

ಕನ್ನಡ ಭಾಷೆಯೆಂದರೆ ಭಾವೈಕ್ಯತೆಯ ಸಂಕೇತ : ಸಾಹಿತಿ ಬನ್ನೂರು ರಾಜು

ಮೈಸೂರು: ಸಾವಿರವರ್ಷಗಳ ಹಿಂದೆಯೇ ಮನುಷ್ಯ ಜಾತಿ ತಾನೊಂದೇ ವಲಂ ಎಂದು ಮೊಟ್ಟ ಮೊದಲಿಗೆ ಮಾನವೀಯ ನೆಲೆಯಲ್ಲಿ ಇಡೀ ಜಗತ್ತನ್ನು ನೋಡಿದ ಕನ್ನಡದ ಆದಿ ಕವಿ ಪಂಪನ ಆಶಯದ ಕನ್ನಡ ಭಾಷೆಯೆಂದರೆ ಅದು ಭಾವೈಕ್ಯತೆಯ ಸಂಕೇತ ಮತ್ತು ಸಹಬಾಳ್ವೆಯ ಸಾಕಾರ ಹಾಗೂ ಸೌಹಾರ್ದತೆಯ ಝೆಂಕಾರ ಎಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಹೊರವಲಯದಲ್ಲಿನ ಬೆಮೆಲ್ ಕಾರ್ಖಾನೆಯ ಸಮೀಪದಲ್ಲಿರುವ ಪ್ರತಿಷ್ಠಿತ ಡೀಪೌಲ್ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ಸಂಪೂರ್ಣ ಕನ್ನಡಮಯ ಅಲಂಕೃತ ವರ್ಣರಂಜಿತ ವೇದಿಕೆಯಲ್ಲಿ ಕಾಲೇಜಿನ ವತಿಯಿಂದ ಆಯೋಜಿಸಿದ್ದ ೬೮ನೇ ಕನ್ನಡ ರಾಜ್ಯೋತ್ಸವ ಮತ್ತು ೫೦ನೇ ವರ್ಷದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಕನ್ನಡ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,”ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು” ಎಂಬ ಕವಿವಾಣಿಯಂದದ ಭಾವನಾತ್ಮಕ ಭಾಷೆ ಕನ್ನಡವಾಗಿದ್ದು ಕನ್ನಡಿಗರು ಮಾತ್ರವಲ್ಲದೆ ಅನ್ಯ ಭಾಷಿಕರೂ ಸಹ ಪ್ರೀತಿಸಲ್ಪಡುವ ಬಹು ಆಕರ್ಷಣೀಯ ಚೆಂದದ ಭಾಷೆ ಕನ್ನಡವೆಂದರು.

ಆಂಗ್ಲರು ನಮ್ಮ ನೆಲವನ್ನು ಬಿಟ್ಟು ಹೊರಟು ಹೋಗಿದ್ದರೂ ಅವರು ಬಿಟ್ಟು ಹೋಗಿರುವ ಇಂಗ್ಲಿಷ್ ಭಾಷೆ ನಮ್ಮವರ ಕೆಲವೊಂದು ಅರ್ಥ ಹೀನ ಆಸೆಗಳು ಮತ್ತು ವ್ಯಾಮೋಹಗಳಿಂದಾಗಿ ಕನ್ನಡ ಭಾಷೆಯ ಮೇಲೆ ಸವಾರಿ ಮಾಡುತ್ತಿದೆ. ಆದರೆ ಇದಕ್ಕೆ ಕನ್ನಡ ಯಾವತ್ತೂ ಜಗ್ಗುವುದಿಲ್ಲ.ನಮ್ಮ ಕನ್ನಡ ಅಂತಹ ಸಶಕ್ತವಾದ ಅದ್ಭುತ ವಾದ ಭಾಷೆ. ಇದನ್ನು ಈಗಾಗಲೇ ಕನ್ನಡದ ಅನೇಕ ಮಹತ್ಸಾಧಕರು ಸಾಧಿಸಿ ತೋರಿಸಿ ವಿಶ್ವದ ಗಮನ ಸೆಳೆದು ಜಗದ್ವಿಖ್ಯಾತರಾಗಿರುವುದನ್ನು ಕನ್ನಡ ಚರಿತ್ರೆಯಲ್ಲಿ ನಾವು ಕಾಣಬಹುದು. ಹಾಗಂತ ಇಂಗ್ಲೀಷ್ ಸೇರಿದಂತೆ ಇತರ ಭಾಷೆಗಳನ್ನು ಕಲಿಯಬಾರದು ಎಂದೇನೂ ಇಲ್ಲ. ಆದರೆ ಅದು ಊಟಕ್ಕೆ ಉಪ್ಪಿನ ಕಾಯಿ ಇದ್ದಂತೆ ಇರಬೇಕಷ್ಟೆ.ಅನ್ಯಭಾಷೆ ಅರಿವಿಗಿರಬೇಕು, ನಮ್ಮ ತಾಯ್ನೆಲದ ಕನ್ನಡ ಭಾಷೆ ಬದುಕಾಗಬೇಕು. ಮಾತೃಭಾಷೆ ಮಾತ್ರ ಹೊಟ್ಟೆ ತುಂಬುವ ಮೃಷ್ಟಾನ್ನದ ಊಟವಾಗಬೇಕು.

ಇಪ್ಪತ್ತಾರು ಅಕ್ಷರಗಳ ಇಂಗ್ಲಿಷ್ ಭಾಷೆ ನಮ್ಮನ್ನು ಇನ್ನೂರು ವರ್ಷಗಳ ಕಾಲ ಆಳಿದ ಭಾಷೆ ಎಂಬುದೊಂದನ್ನು ಬಿಟ್ಟರೆ ಇಂಗ್ಲಿಷ್ ನಲ್ಲಿ ಏನೇನೂ ಇಲ್ಲ.ಇದೊಂದು ವ್ಯವಹಾರಿಕ ಭಾಷೆ ಅಷ್ಟೆ. ಇಂಗ್ಲೀಷ್ ನೊಳಗೆ ಪ್ರತಿಸ್ಪಂದಿಸುವ ಭಾವನೆಗಳೂ ಇಲ್ಲ. ಭಾವನಾತ್ಮಕ ಶಬ್ಧಗಳಂತೂ ಇಲ್ಲವೇ ಇಲ್ಲ. ಪ್ರೇಯಸಿಯ ಪ್ರೇಮಕ್ಕೂ , ಹೆಂಡತಿಯ ಪ್ರೀತಿಗೂ, ತಾಯಿಯ ವಾತ್ಸಲ್ಯಕ್ಕೂ, ಒಡಹುಟ್ಟಿದವರ ಭ್ರಾತೃತ್ವಕ್ಕೂ , ಅಮ್ಮ, ಚಿಕ್ಕಮ್ಮ, ದೊಡ್ಡಮ್ಮನ ಮಾತೃತ್ವಕ್ಕೂ ಇಂಗ್ಲೀಷ್ ನಲ್ಲಿ ಒಂದೇ ಶಬ್ದ ‘ಲವ್’. ಆದರೆ ಕನ್ನಡ ಭಾಷೆ ಹಾಗಲ್ಲ. ಪ್ರತಿಯೊಂದು ಭಾವನೆಗಳಿಗೂ ಅನೇಕ ಶಬ್ದಗಳುಂಟು. ಅಷ್ಟೊಂದು ಸಮೃದ್ಧವಾದ ಭಾಷೆ ಕನ್ನಡ. ಇದರಲ್ಲಿ ಏನಿಲ್ಲ ಎನ್ನುವಂತಿಲ್ಲ. ಎಲ್ಲವೂ ಇಲ್ಲುಂಟೆಂದ ಅವರು ಡೀ ಪೌಲ್ ಇಂಟರ್ ನ್ಯಾಷನಲ್ ಕಾಲೇಜ್ ಒಂದು ಸುಂದರ ಪರಿಸರವುಳ್ಳ ಚೆಂದದ ಕ್ಯಾಂಪಸ್ ಆಗಿದ್ದು ಇಲ್ಲಿ ಕನ್ನಡಿಗರಿಗಿಂತ ಇತರೇ ಭಾಷಿಕರು ಹೆಚ್ಚಾಗಿದ್ದರೂ ಸಹ ಅವರ ಕನ್ನಡ ಪ್ರೇಮ ಎಲ್ಲರಿಗೂ ಮಾದರಿಯಾಗಿದ್ದು ಇಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಇದನ್ನು ಕನ್ನಡೀಕರಿಸಿದೆಯೆಂದು ಶ್ಲಾಘಸಿದರು.

ವಿದ್ಯಾರ್ಥಿನಿ ಆರ್ಯ ಅವರ ಸುಶ್ರಾವ್ಯವಾದ ಪ್ರಾರ್ಥನಾ ಗೀತೆಯೊಡನೆ ಪ್ರಾರಂಭವಾದ ಈ ಸಮಾರಂಭದಲ್ಲಿ ವಿದ್ಯಾರ್ಥಿನಿ ಶ್ರೀದೇವಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ರೆ.ಡಾ. ಬೈಜು ಅಂತೋಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಉಪ ಪ್ರಾಂಶುಪಾಲರಾದ ರೆ.ಡಾ. ಜಾಯ್ ತುರುತ್ತೇಲ್, ಶಿಂಜೋ ಅಂತೋಣಿ , ಅಧ್ಯಾಪಕರಾದ ಡಾ.ಮಮತಾ ಮತ್ತು ಲಂಕೇಶ್ ಸೇರಿದಂತೆ ಎಲ್ಲಾ ಅಧ್ಯಾಪಕರು , ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದು ಇದೇ ವೇಳೆವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡ ಲಾಯಿತಲ್ಲದೆ ಪತ್ರಕರ್ತರೂ ಆದ ಸಾಹಿತಿ ಬನ್ನೂರು ರಾಜು ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು.ಕೊನೆಯಲ್ಲಿ ಧನುಷಾ ವಂದನಾರ್ಪಣೆ ಮಾಡಿದರು. ವೇದಿಕೆಯ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಾದ ಚಂದನ್, ವೈಷ್ಣವಿ, ನಿಶಿತ್, ಧನುಷ , ಸಯನಾ , ಲಿಂಜು , ನಿಮ್ಯಾ , ಟೀನಾ, ಶ್ರೀದೇವಿ,ಮುಂತಾದ ವಿದ್ಯಾರ್ಥಿಗಳು ಕನ್ನಡ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಎಲ್ಲರನ್ನೂ ರಂಜಿಸಿದರು.

RELATED ARTICLES
- Advertisment -
Google search engine

Most Popular