ಬೆಂಗಳೂರು : ಕಾಂತರಾಜು ಅಧ್ಯಕ್ಷತೆಯ ಜಾತಿ ಗಣತಿಯ ದತ್ತಾಂಶ ಕಳೆದು ಹೋಗಿಲ್ಲ, ಅದು ಸೇಫಾಗಿದೆ ಎಂದು ಹಿಂದುಳಿದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಸ್ಪಷ್ಟನೆ ನೀಡಿದ್ದು, ವರದಿಯ ಮೂಲ ಉದ್ದೇಶ ಹಾಳಾಗಿಲ್ಲ, ಹಾಳಾಗೋದು ಇಲ್ಲ ಡಿಸೆಂಬರ್ ಒಳಗೆ ಕಾಂತರಾಜ್ ವರದಿ ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ೨೦೧೫ರಲ್ಲಿ ಕೈಗೊಳ್ಳಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೂಲಪ್ರತಿ ಕಳೆದು ಹೋಗಿರುವ ಕುರಿತು ಸರಕಾರದ ಜತೆ ನಡೆಸಿದ ಪತ್ರ ವ್ಯವಹಾರದ ಸಂಪೂರ್ಣ ಮಾಹಿತಿ ನೀಡಬೇಕು ಹಾಗೂ ಈ ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ಪತ್ರ ಬರೆದಿದ್ದಾರೆ.
೨೦೧೫ ರಲ್ಲಿ ಕರ್ನಾಟಕ ಸರ್ಕಾರ ೧೮೦ ಕೋಟಿ ರೂ. ಖರ್ಚು ಮಾಡಿ ಮಾಡಿದ ಸಮೀಕ್ಷೆಯ ಮೂಲ ಪ್ರತಿಯೇ ಕಳೆದುಹೋಗಿರುವುದು ಹಾಗೂ ಲಭ್ಯವಿರುವ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲದೆ ಇರುವುದು ಆಯೋಗದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗ ಹಿಂದಿನ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಯವರಿಗೆ ನೋಟಿಸ್ ನೀಡಿ ನಂತರ ರಾಜಕೀಯ ಒತ್ತಡಕ್ಕೆ ಮಣಿದು ತನಿಖೆಯನ್ನೇ ಅರ್ಧಕ್ಕೆ ಕೈಬಿಟ್ಟಿರುವುದು ಆಶ್ಚರ್ಯದ ಸಂಗತಿ. ಈ ಕೂಡಲೇ ವರದಿ ನೈಜತೆಯ ಬಗ್ಗೆ ತನಿಖೆ ಮಾಡಬೇಕು ಹಾಗು ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ವರದಿ ಕುರಿತು ಹಿಂದುಳಿದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಡಿಸೆಂಬರ್ ಒಳಗೆ ಕಾಂತರಾಜ್ ವರದಿ ಸಲ್ಲಿಕೆ ಮಾಡುತ್ತೇವೆ. ಆದಷ್ಟು ಬೇಗ ವರದಿ ಕೊಡುತ್ತೇವೆ. ವರದಿಯ ಹಾರ್ಡ್ ಕಾಪಿ, ಸಾಫ್ಟ್ ಕಾಪಿ ನಮ್ಮ ಬಳಿ ಇದೆ. ಮಿಸ್ ಆಗಿಲ್ಲ. ಮೂಲ ಪ್ರತಿ ಕಳೆದು ಹೋಗಿರುವ ಬಗ್ಗೆ ಅಂದಿನ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಸರ್ಕಾರದಿಂದ ನಮಗೆ ಉತ್ತರ ಬಂದಿಲ್ಲ ಎಂದರು.
ಇದೀಗ ಹೊಸ ಸರ್ಕಾರ ಬಂದ ಬಳಿಕ ಈ ವಿಚಾರವಾಗಿ ಮತ್ತೊಂದು ಪತ್ರವನ್ನು ಬರೆದಿದ್ದೆವು. ಇರುವ ದತ್ತಾಂಶಗಳನ್ನು ಆಧರಿಸಿ ವರದಿ ಕೊಡಿ ಎಂದು ಹೇಳಿದ್ದಾರೆ ಎಂದು ತಿಳಿಸಿದರು.