ಕೆ.ಆರ್.ನಗರ: ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸೌಲಭ್ಯ ನೀಡಲು ಹೆಚ್ಚಿನ ಟಿಸಿಗಳನ್ನು ಮೈಸೂರು ಜಿಲ್ಲೆಯಲ್ಲಿ ಆಳವಡಿಸಬೇಕೆಂದು ಜಿಲ್ಲಾ ರೈತ ಮುಖಂಡ ಚಿಕ್ಕಕೊಪ್ಪಲು ಡಿ.ಪುನೀತ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆ ಇಲ್ಲದೇ ಬರಗಾಲದ ಸ್ಥಿತಿ ಇದ್ದು, ಇಂತಹ ಸ್ಥಿತಿಯಲ್ಲಿ ಕಾಡುವ ಟಿಸಿಗಳ ಸಮಸ್ಯೆಯಿಂದ ಸಮರ್ಪಕ ವಿದ್ಯುತ್ ದೊರೆಯದೇ ರೈತರಿಗೆ ತೊಂದರೆ ಆಗುವುದನ್ನು ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಟಿಸಿಗಳು ಕೆಟ್ಟರೇ ಅದನ್ನು ಎರಡು ದಿನದಲ್ಲಿ ಬದಲಾಯಿಸಲು ಚೆಸ್ಕಾಂನವರು ಕ್ರಮ ಕೈಗೊಳ್ಳಬೇಕು ಜೊತೆ ಇವುಗಳ ದುರಸ್ತಿಗೆ ತಾಲೂಕು ಕೇಂದ್ರಗಳಲ್ಲಿ ಸರ್ವಿಸ್ ಸೆಂಟರ್’ಗಳನ್ನು ತೆರೆಯಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಇದರ ಜೊತೆಗೆ ಗುಣಮಟ್ಟದ ವಿದ್ಯುತ್ ನೀಡಲು ಪ್ರತಿ ಟಿಸಿಗೆ 5 ಪಂಟ್ ಸೆಟ್’ಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡಬೇಕು ಹೆಚ್ಚು ಸಂಪರ್ಕ ನೀಡಬಾರದು. ಈ ವಿಭಾಗಕ್ಕೆ ವಿಶೇಷ ಅಧಿಕಾರಿಗಳನ್ನು ನೇಮಿಸಲು ಮುಂದಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ ಅವರನ್ನು ಡಿ.ಪುನೀತ್ ಒತ್ತಾಯಿಸಿದ್ದಾರೆ.