ಮೈಸೂರು: ರೈಲಿಗೆ ಸಿಲುಕಿ ರೈಲ್ವೇ ಉದ್ಯೋಗಿಯೋಬ್ಬರು ಮೃತಪಟ್ಟಿರುವ ಘಟನೆ ನಿನ್ನೆ ಮೈಸೂರು ರೈಲು ನಿಲ್ದಾಣದ ೬ನೇ ಪ್ಲಾಟ್‌ಫಾರಂನಲ್ಲಿ ನಡೆದಿದ್ದು, ಸಾವು ಆಕಸ್ಮಿಕವೇ ಅಥವಾ ಆತ್ಮಹತ್ಯೆಯ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೂಲತಃ ಚಿರ್ತದುರ್ಗ ಜಿಲ್ಲೆಯ ಚಿಕ್ಕಜಾಜೂರು ಗ್ರಾಮದವರಾಗಿದ್ದು, ಹಾಲಿ ನಗರದ ಗೋಕುಲಂನಲ್ಲಿ ವಾಸಿಸುತ್ತಿರುವ ಗಂಗಮ್ಮ ಅವರ ಪುತ್ರ ಎನ್.ಪ್ರಭು(೪೫) ರೈಲಿಗೆ ಸಿಲುಕಿ ಮೃತಪಟ್ಟವರು.
ನೈರುತ್ಯ ರೈಲ್ವೇ ಮೈಸೂರು ವಿಭಾಗದ ಸಿ ಅಂಡ್ ಡಬ್ಲ್ಯೂ ವಿಭಾಗದಲ್ಲಿ ಸೀನಿಯರ್ ಸೆಕ್ಷನ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭು ಅವರು ಕಳೆದ ೨೦ ವರ್ಷಗಳಿಂದ ಮೈಸೂರಿನಲ್ಲಿ ವಾಸಿಸುತ್ತಿದ್ದರು. ಬುಧವಾರ ಬೆಳಿಗ್ಗೆ ಎಂದಿನಂತೆ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ಮದ್ಯಾಹ್ನ ೧.೫೦ರ ವೇಳೆಯಲ್ಲಿ ಮೈಸೂರು-ಬಾಗಲಕೋಟೆ ರೈಲಿಗೆ ಸಿಲುಕಿ ಅವರು ಮೃತಪಟ್ಟಿದ್ದಾರೆ. ಅಪಘಾತದಿಂದಾಗಿ ಅವರ ರುಂಡ ಮುಂಡ ಎರಡು ಭಾಗವಾಗಿ ಬೇರ್ಪಟ್ಟಿದೆ. ಸ್ಥಳ ಪರಿಶೀಲನೆ ನಡೆಸಿದ ರೈಲ್ವೇ ಪೊಲೀಸರು ಮೃತ ದೇಹವನ್ನು ಕೆಆರ್ ಆಸ್ಪತ್ರೆ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ಕಳಿಸಿ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ. ಈ ಸಂಬಂದ ಪ್ರಕರಣ ದಾಖಲಾಗಿದೆ.