ಮಡಿಕೇರಿ: ನಗರದ ಮೈಸೂರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನ ಕಾಮಗಾರಿಯನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಭೇಟಿ ನೀಡಿ ವೀಕ್ಷಿಸಿದರು. ಈಗಾಗಲೇ ಕಾಮಗಾರಿ ತುಂಬಾ ವಿಳಂಬವಾಗಿದ್ದು, ಆದಷ್ಟು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಕಾಮಗಾರಿ ಪೂರ್ಣಗೊಂಡ ನಂತರ ಬಾಕಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಗೌಡ ಅವರು ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದ ತಳ ಮಹಡಿಯಲ್ಲಿ ಕೊಡವ ಮತ್ತು ಅರೆಭಾಷೆ ಅಕಾಡೆಮಿ ಕಚೇರಿಗಳು, ಗ್ರಂಥಾಲಯ, ವಾಹನ ನಿಲುಗಡೆ, ನೆಲಮಹಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮತ್ತು ಗ್ರಂಥಾಲಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಮತ್ತು ರಿಜಿಸ್ಟ್ರಾರ್‌ಗಳ ಕಚೇರಿ, ಮೊದಲ ಮಹಡಿಯಲ್ಲಿ ವೇದಿಕೆ ಸಭಾಂಗಣ, ಎರಡನೇ ಮಹಡಿಯಲ್ಲಿ ಡಾರ್ಮೆಟ್ರರಿ ಒಳಗೊಂಡಿದೆ ಎಂದು ಮಾಹಿತಿ ನೀಡಿದರು. ಸಹಾಯಕ ಎಂಜಿನಿಯರ್ ಸತೀಶ್ ಅವರು ಕಾಮಗಾರಿ ಸಂಬಂಧಿಸಿದಂತೆ ಮಾಹಿತಿ ನೀಡಿ ಜನವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.