ಚಿತ್ರದುರ್ಗ : ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಆಚಲ ನಿರ್ಧಾರ, ಆತ್ಮವಿಶ್ವಾಸ, ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಆತ್ಮಸ್ಥೈರ್ಯ ಇದ್ದಲ್ಲಿ ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.
ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರಾಗಿದ್ದರೂ ಸಹ ಬಹಳಷ್ಟು ಮಂದಿ ಐಎಎಸ್ ಪರೀಕ್ಷೆಯನ್ನೂ ಪಾಸ್ ಮಾಡಿದ್ದಾರೆ. ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಹಾಗಾಗಿ ಸಾಧನೆ ಮಾಡಬೇಕು ಎಂದು ಛಲ ಹೊಂದಿದ್ದರೆ ಅಂಗವೈಕಲ್ಯತೆ ಸಾಧನೆಗೆ ಅಡ್ಡಿಯಾಗಲಾರದು ಎಂದು ಹೇಳಿದರು. ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಕಲಚೇತರು ತುಂಬಾ ಉತ್ಸಾಹ ಹಾಗೂ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ವಿಜಯ್ ಕುಮಾರ್ ಮಾತನಾಡಿ, ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಕಲಚೇತನರು ಸಂತೋಷ ಹಾಗೂ ಉತ್ಸಾಹದಿಂದ ಭಾಗವಹಿಸಬೇಕು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎ.ಎಂ.ವೀಣಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹಿಳಾ ಅಭಿವೃದ್ಧಿ ಅಧಿಕಾರಿ ಪವಿತ್ರ, ಶಾಲಾ ಶಿಕ್ಷಣ ಇಲಾಖೆಯ ಚಿದಾನಂದ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಜಯಣ್ಣ ಸೇರಿದಂತೆ ಎಂ.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ಕಾರ್ಯಕರ್ತರು ಹಾಗೂ ವಿಕಲಚೇತನರು ಇದ್ದರು.