ಚಿತ್ರದುರ್ಗ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರನ್ನು ನೋಂದಾಯಿಸುವ ಸಲುವಾಗಿ ಜಿಲ್ಲೆಯ ಪಿಯುಸಿ, ಪದವಿ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಸೇರಿದಂತೆ ಎಲ್ಲ ಕಾಲೇಜುಗಳಲ್ಲಿ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಶುಕ್ರವಾರ ಲೋಕಸಭಾ ಚುನಾವಣೆ-೨೦೨೪ರ ಪ್ರಯುಕ್ತ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಧಾನಸಭಾ ಕ್ಷೇತ್ರವಾರು ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಚುರ ಪಡಿಸಲಾಗಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ೧೮ ವರ್ಷ ಮಾತ್ರವಲ್ಲದೆ, ೨೦೦೬ ಡಿಸೆಂಬರ್ ೩೧ ರ ಒಳಗೆ ಜನಿಸಿರುವ ಎಲ್ಲರನ್ನೂ ಅಂದರೆ, ೧೭ ವರ್ಷ ಪೂರ್ಣಗೊಂಡವರನ್ನೂ ಕೂಡ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ನಮೂನೆ-೦೬ ಪಡೆದುಕೊಳ್ಳಬೇಕು. ಡಿಸೆಂಬರ್ ೯ ರವರೆಗೆ ನೊಂದಣಿಗೆ ಅವಕಾಶವಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಯಾವುದೇ ಅರ್ಹ ವ್ಯಕ್ತಿ ಮತದಾರರ ಪಟ್ಟಿಯಿಂದ ಹೊರಗುಳಿಯದೆ, ವ್ಯವಸ್ಥಿತ ರೀತಿಯಲ್ಲಿ ಮತಪಟ್ಟಿಯಲ್ಲಿ ನೊಂದಾಯಿಸುವ ಕೆಲಸ ಆಗಬೇಕು ಎಂದು ಸೂಚನೆ ನೀಡಿದರು.
ಸ್ವೀಪ್ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ವಿಶೇಷ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು, ತಾಲ್ಲೂಕು ಪಂಚಾಯಿತಿ ಇಒಗಳು ಎಲ್ಲ ಕಾಲೇಜುಗಳಿಗೆ ಭೇಟಿ ನೀಡಿ, ಯುವ ಮತದಾರರ ನೊಂದಣಿಗೆ ವಿಶೇಷ ಅಭಿಯಾನ, ಜಾಗೃತಿ ಮೂಡಿಸಬೇಕು. ಯುವ ಮತದಾರರ ನೋಂದಣಿಯಲ್ಲಿ ಆಯಾ ತಾಲ್ಲೂಕು ಪಂಚಾಯಿತಿ ಇಒಗಳು ಬಹು ಮುಖ್ಯ ಪಾತ್ರವಹಿಸಲಿದ್ದು, ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ. ಯಾವುದೇ ಲೋಪ-ದೋಷಗಳಿಲ್ಲದಂತೆ ಯುವ ಮತದಾರರ ನೋಂದಣಿ ಮಾಡಿಸಿ ಎಂದು ಹೇಳಿದರು.