ಉಡುಪಿ: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗೊಂಡಿರುವ ಕಾಮಗಾರಿಗಳ ಕುರಿತು ವಿಳಂಬ ಧೋರಣೆಯನ್ನು ತಾಳದೆ, ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ.
ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೈಂದೂರು ತಾಲೂಕಿನ ಮರವಂತೆಯಲ್ಲಿ ಹೊರ ಬಂದರು, ಗಂಗೊಳ್ಳಿ ಮೀನುಗಾರಿಕೆ ಬಂದರಿನ ಮರು ನಿರ್ಮಾಣ ಹಾಗೂ ಗಂಗೊಳ್ಳಿ ಮೀನುಗಾರಿಕಾ ಬಂದರು ಹಾಗೂ ಕೋಡಿ ಜೆಟ್ಟಿಯ ನ್ಯಾವಿಗೇಷನ್ ಚಾನೆಲ್‌ನಲ್ಲಿ ಹೂಳೆತ್ತುವ ಕಾಮಗಾರಿಗಳನ್ನು ತಾಂತ್ರಿಕ ಸಮಸ್ಯೆಗಳಿಂದಾಗಿ ಕೈಗೊಳ್ಳದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಂದರು ಇಲಾಖೆ ಹಾಗೂ ಸಿಆರ್ ಝ್ ನವರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಕಾಮಗಾರಿಗಳನ್ನು ತ್ವರಿತವಾಗಿ ಗುಣಮಟ್ಟದೊಂದಿಗೆ ಕೈಗೊಳ್ಳುವುದರೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಮಳೆ, ಬೆಳೆ ರಸಗೊಬ್ಬರಗಳ ದಾಸ್ತಾನುಗಳ ಬಗ್ಗೆ ಮಾತನಾಡಿದ ಅವರು, ಈ ಬಾರಿ ಭತ್ತದ ಇಳುವರಿ ಶೇಕಡ ೫೦ ರಷ್ಟು ಕಡಿಮೆಯಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ತಾಲೂಕುವಾರು ವಿವರವನ್ನು ಸಂಗ್ರಹಿಸುವಂತೆ ಸೂಚಿಸಿದರು.
ಬರ ನಿರ್ವಹಣೆ ಕಾರ್ಯವನ್ನು ಸಮರ್ಥವಾಗಿ ಎದುರಿಸಲು ಸೂಚನೆ: ಜಿಲ್ಲೆಯಲ್ಲಿ ವಾಡಿಕೆಗಿಂತ ಶೇಕಡ ೨೨ ರಷ್ಟು ಕಡಿಮೆ ಮಳೆಯಾಗಿದ್ದು, ಅಂತರ ಜಲಮಟ್ಟವೂ ಶೇಕಡ ೨೪ರಷ್ಟು ಕಡಿಮೆಯಾಗಿದ್ದು, ಮುಂಬರುವ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.