ಗುಂಡ್ಲುಪೇಟೆ: ಕಾದಾಟದಲ್ಲಿ ಗಾಯಗೊಂಡು ನಿತ್ರಾಣಗೊಂಡಿದ್ದ ಸುಮಾರು ೩ ವರ್ಷದ ಗಂಡು ಹುಲಿಯೊಂದು ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಣಾ ವ್ಯಾಪ್ತಿಯ ಮದ್ದೂರು ವಲಯದ ದೊಡ್ಡಕರಿಯಯ್ಯ ಎಂಬುವರ ಜಮೀನಿನಲ್ಲಿ ಶುಕ್ರವಾರ ನಡೆದಿದೆ.
ಕಾಡಿನೊಳಗೆ ವನ್ಯಪ್ರಾಣಿಗಳ ಕಾದಾಟದಿಂದ ಸುಮಾರು ೩ ವರ್ಷದ ಗಂಡು ಹುಲಿಯ ತಲೆ ಮತ್ತು ಮೈಮೇಲೆ ತೀವ್ರ ಪೆಟ್ಟಾಗಿತ್ತು. ಇದರಿಂದ ಹುಲಿಯು ಸಂಪೂರ್ಣವಾಗಿ ನಿತ್ರಾಣಗೊಂಡು ನಡೆಯಲಾರದ ಸ್ಥಿತಿಗೆ ತಲುಪಿತ್ತು. ಇದರ ಮಾಹಿತಿ ಅರಿತ ಅರಣ್ಯ ಅಧಿಕಾರಿಗಳು ಮತ್ತು ಪಶು ವೈದ್ಯ ವಾಸಿಂ ಮಿರ್ಜಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಸೆರೆಗೂ ಮುನ್ನ ಹುಲಿ ಮರಣ ಹೊಂದಿದೆ ಎಂದು ತಿಳಿದು ಬಂದಿದೆ. ಬಂಡೀಪುರ ಹುಲಿ ಯೋಜನೆಯ ನಿರ್ದೇಶಕರಾದ ಡಾ.ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಿಯಮದಂತೆ ಕ್ರಮ ಜರುಗಿಸಲಾಗಿದೆ.
ಈ ಸಂಧರ್ಭದಲ್ಲಿ ಗುಂಡ್ಲುಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ, ಮದ್ದೂರು ವಲಯ ಅರಣ್ಯಧಿಕಾರಿ ಬಿ.ಎಂ.ಮಲ್ಲೇಶ್, ಅರಣ್ಯ ಇಲಾಖೆಯ ಪಶುವೈದ್ಯ ವಾಸಿಂ ಮಿರ್ಜಾ, ವಲಯ ಅರಣ್ಯಧಿಕಾರಿ ನರೇಶ್, ವಿಶೇಷ ಹುಲಿ ಸಂರಕ್ಷಣಾ ದಳ, ಸರ್ಕಾರೇತರ ಸಂಸ್ಥೆಯ ರಘುರಾಮ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.