ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಕಾವೇರಿಯ ಕಿಚ್ಚು ತಾರಕಕ್ಕೇರಿದ್ದು, ಕಾವೇರಿಗಾಗಿ ಮತ್ತೊಂದು ಸುತ್ತಿನ ಹೋರಾಟಕ್ಕೆ ರೈತರು ಮುಂದಾಗಿದ್ದಾರೆ.
ಕಾವೇರಿ ಕೊಳ್ಳದ ರೈತರಿಗಾದ ಅನ್ಯಾಯವಾಗಿದ್ದು, ಕಾವೇರಿಗಾಗಿ ರೈತರು ಇಂದಿನಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸಲು CWRC ಶಿಫಾರಸ್ಸು ಹಿನ್ನಲೆ ರೈತರು ಧರಣಿ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಳೆದ 82 ದಿನಗಳಿಂದ ರೈತ ಹಿತರಕ್ಷಣಾ ಸಮಿತಿಯಿಂದ ನಿರಂತರ ಧರಣಿ ಕೈಗೊಂಡಿದ್ದು, ಧರಣಿ ಜೊತೆಗೆ ಉಪವಾಸ ಸತ್ಯಾಗ್ರಹವನ್ನು ರೈತರು ಆರಂಭಿಸಿದ್ದಾರೆ.
ಪ್ರತಿನಿತ್ಯ ಐದುಕ್ಕು ಹೆಚ್ಚು ಮಂದಿಯಂತೆ ಉಪವಾಸ ಕೂರಲು ನಿರ್ಧಾರ ಮಾಡಲಾಗಿದೆ. ಕಾವೇರಿಗಾಗಿ ಇಂದು 6 ಮಂದಿ ರೈತರು ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.
ಸರ್ಕಾರ ಕಾವೇರಿ ಬಗ್ಗೆ ನಿರ್ಲಕ್ಷ್ಯ ತೋರಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ರಾಜಕೀಯ ಕಿತ್ತಾಟದ ನಡುವೇ ರೈತರು ಬಲಿಯಾಗ್ತಿದ್ದಾರೆ. ಸರ್ಕಾರ ಕೂಡಲೇ ವಿಶೇಷ ಜಂಟಿ ಅಧಿವೇಶನ ಕರೆದು ಕಾವೇರಿ ವಿಷಯ ಚರ್ಚೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಕುಡಿಯಲು ಇರುವ ನೀರನ್ನ ಉಳಿಸಿಕೊಳ್ಳುವ ಅವಶ್ಯಕತೆ ಇದೆ. ಈಗಲಾದ್ರು ಸರ್ಕಾರ ಕೂಡಲೇ ಎಚ್ಚೆತ್ತು ದಿಟ್ಟ ನಿರ್ಧಾರ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.