ಕೆ.ಆರ್.ನಗರ: ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಮಹಿಳಾ ಕಾಲೇಜಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸಬೇಕು, ಅದಕ್ಕಾಗಿ ಬೇಕಾಗಿರುವ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ೨೦೨೩-೨೪ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮೂಲಸೌಕರ್ಯ ಕಲ್ಪಿಸುವ ಮೊದಲ ಹಂತವಾಗಿ ಶೌಚಾಲಯ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ೫ ಲಕ್ಷ ಬಿಡುಗಡೆ ಮಾಡಿಸಲಾಗುತ್ತದೆ ಎಂದರು.
ಕಾಲೇಜು ಎ ಗ್ರೇಡ್ ಮಾನ್ಯತೆ ಪಡೆದಿದ್ದು ಎ+ ಪಡೆಯಲು ಕಾಲೇಜಿಗೆ ಇನ್ನಷ್ಟು ಸೌಕರ್ಯ ಒದಗಿಸಲು ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷನಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಶಾಸಕರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹೆಣ್ಣು ಮಕ್ಕಳು ಅಂಕಗಳಿಕೆಗೆ ಮಾತ್ರ ಆದ್ಯತೆ ನೀಡುವ ಬದಲು ಇತರ ಚಟುವಟಿಕೆಗಳಲ್ಲೂ ಭಾಗಹಿಸುವುದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದ ಶಾಸಕ ಡಿ.ರವಿಶಂಕರ್ ಹತ್ತನೇ ತರಗತಿ ನಂತರ ಉದ್ಯೋಗ ಪಡೆಯುವವರೆಗೂ ಜೀವನದಲ್ಲಿ ಸಾಧಿಸಬೇಕಾದ ಬಗ್ಗೆ ಗುರಿ ಹೊಂದಬೇಕು ಎಂದು ಕಿವಿ ಮಾತು ಹೇಳಿದರು.
ತಾಲೂಕು ಪಂಚಾಯಿತಿ ಇಒ ಜಿ.ಕೆ.ಹರೀಶ್ ಮಾತನಾಡಿ ಸರ್ಕಾರ ಶಿಕ್ಷಣಕ್ಕೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದ್ದು ಅವುಗಳನ್ನು ಸರಿಯಾದ ರೀತಿ ಬಳಕೆ ಮಾಡಿಕೊಂಡು ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆಯಬೇಕು, ಮಾತೃಭಾಷೆಯಲ್ಲಿ ಶಿಕ್ಷಣ ಪಡೆದಾಗ ಎಲ್ಲಾ ರೀತಿಯಲ್ಲೂ ಸಾಧನೆ ಮಾಡಲು ಸಾಧ್ಯವಿದೆ ಇದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.
ಕಳೆದ ಸಾಲಿನಲ್ಲಿ ವಿದ್ಯಾರ್ಥಿ ವೇತನ ಬಿಡುಗಡೆಗೊಂಡಿಲ್ಲ ಎಂದು ವಿದ್ಯಾರ್ಥಿನಿಯರು ಶಾಸಕರ ಗಮನ ಸೆಳೆದರು ಇದಕ್ಕುತ್ತರಿಸಿದ ಶಾಸಕ ಡಿ.ರವಿಶಂಕರ್ ಸಂಬoಧಪಟ್ಟ ಇಲಾಖಾ ಅಧಿಕಾರಗಳೊಂದಿಗೆ ಚರ್ಚಿಸಿ ಬಿಡುಗಡೆಗೊಳಿಸಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನಿಂದ ವರ್ಗಾವಣೆಗೊಂಡ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.
ಕಾಲೇಜು ಪ್ರಾಂಶುಪಾಲ ಪ್ರೋ.ಬಿ.ಟಿ.ವಿಜಯ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ. ಜಯಸುಬ್ಬಯ್ಯ, ಉಪನ್ಯಾಸಕರಾದ ಡಾ.ಕಿರಣ್‌ಕುಮಾರ್, ಡಾ.ಬಿ.ವಿ.ಗಣೇಶ್, ಡಾ.ಎಸ್.ಶಂಕರ್, ಡಾ.ಸೀಮಾಬಡಿಗೇರ್, ಹೆಚ್.ಡಿ.ಕಾಂತರಾಜು, ಪಿ.ಪ್ರಶಾಂತ್, ಸಾಂಸ್ಕೃತಿಕ ಸಮಿತಿ ವಿದ್ಯಾರ್ಥಿ ಅಧ್ಯಕ್ಷೆ ಕೆ.ಜಿ.ಅಂಬಿಕಾ, ಕಾರ್ಯದರ್ಶಿ ತ್ರಿವೇಣಿ, ಪುರಸಭೆ ಸದಸ್ಯರಾದ ಮಿಕ್ಸರ್‌ಶಂಕರ್, ನಟರಾಜು ಮತ್ತಿತರರು ಹಾಜರಿದ್ದರು