ಮೈಸೂರು: ಜಗತ್ತಿನ ಸರ್ವ ಶ್ರೇಷ್ಠ ಭಾಷೆಗಳಲ್ಲೊಂದಾದ ನಮ್ಮ ಮಾತೃಭಾಷೆ ಕನ್ನಡ ಎಂಬುದು ಪ್ರತಿಯೊಬ್ಬರ ಬದುಕಿನಲ್ಲೂ ಹುಟ್ಟಿನೊಡನೆಯೇ ಕರುಳ ಸಂಬಂಧಿಯಾಗಿ ಬೆಸೆದುಕೊಂಡು ರಕ್ತಗತವಾಗಿ ಹರಿದು ಬಂದಿರುವ ಜೀವದ ಭಾಷೆ ಮಾತ್ರವಲ್ಲ , ಜೀವನದ ಭಾಷೆಯೂ ಹೌದೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಹೆಚ್.ಡಿ.ಕೋಟೆ ರಸ್ತೆಯಲ್ಲಿರುವ ರೈಲ್ವೆ ವರ್ಕ್ ಷಾಪ್ ನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನ ಸಂಯುಕ್ತವಾಗಿ ಏರ್ಪಡಿಸಿದ್ದ ೬೮ನೇ ಕನ್ನಡ ರಾಜ್ಯೋತ್ಸವ ಮತ್ತು ೫೦ನೇ ಸುವರ್ಣ ಕರ್ನಾಟಕೋತ್ಸವ ಸಮಾರಂಭವನ್ನು ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಸಾವಿರಾರು ಭಾಷೆಗಳಿರಬಹುದಾದರೂ ನಮ್ಮ ಮಾತೃ ಭಾಷೆ ಕನ್ನಡಕ್ಕೆ ಸಮ ಮತ್ತೊಂದು ಭಾಷೆ ಇಲ್ಲವೇ ಇಲ್ಲವೆಂದರು.
ಹುಟ್ಟಿನಿಂದ ಸಾವಿನ ತನಕವೂ ಮಾತೃಭಾಷೆ ಕನ್ನಡ ನಮ್ಮ ಜೊತೆಯಲ್ಲಿ ಇರುತ್ತದೆ. ಕನ್ನಡ ಎಂಬ ಮೂರಕ್ಷರಗಳು ಗಾಯತ್ರಿ ಮಂತ್ರ ಇದ್ದಂತೆ. ಅಂತಹ ಶಕ್ತಿ ಕನ್ನಡದ್ದು. ಇಂತಹ ತಾಯಿ ನುಡಿಯನ್ನು ಯಾರೂ ಮರೆಯುವಂತಿಲ್ಲ. ಒಂದು ಪಕ್ಷ ಮರೆತರೆ ಹೆತ್ತವ್ವನನ್ನು ಮರೆತಂತೆ. ಆದ್ದರಿಂದ ಪ್ರತಿಯೊಬ್ಬರೂ ಮಾತೃಭಾಷೆಗೆ ಆದ್ಯತೆ ಕೊಟ್ಟು ಅದನ್ನು ತಾಯಿಯಂತೆ ಪ್ರೀತಿಸಿ ಪೋಷಿಸಬೇಕು.ಇಂದು ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ, ಭೂಮಾಲಿನ್ಯ, ಪರಿಸರ ಮಾಲಿನ್ಯದಂತೆ ಮನುಷ್ಯನ ಮನೋಮಾಲಿನ್ಯದಿಂದಾಗಿ ಭಾಷಾ ಮಾಲಿನ್ಯವೂ ಆಗುತ್ತಿದೆ. ಹಾಗಾಗಿ ನಮ್ಮ ಮಾತೃಭಾಷೆ ಕನ್ನಡ ಮಾಲಿನ್ಯ ವಾಗದಂತೆ ಪರಿಶುದ್ಧವಾದ ಕನ್ನಡವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಸುಪ್ರಸಿದ್ಧ ಸಂಖ್ಯಾ ಶಾಸ್ತ್ರಜ್ಞ, ಲೇಖಕ ಎಸ್. ಜಿ. ಸೀತಾರಾಮ್ ಅವರು ಮಾತನಾಡಿ, ಅನೇಕ ಸೀಮೆ, ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡು ವವರ ಪ್ರಾಂತ್ಯಗಳನ್ನು ಒಗ್ಗೂಡಿಸಿದ ಕನ್ನಡ ನಾಡಿನ ಏಕೀಕರಣದ ಹಿನ್ನೆಲೆಯಲ್ಲಿ ಕರ್ನಾಟಕದ ಇತಿಹಾಸವನ್ನು ಸವಿವರವಾಗಿ ಸುಲಭವಾಗಿ ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ ತಿಳಿಸಿ ಕೊಟ್ಟರು. ಹಾಗೆಯೇ ರಾಜ್ಯೋತ್ಸವದ ದ್ಯೋತಕವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಬಗೆಯ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕಲಾವಿದೆ ಹಾಗು ಲೇಖಕಿ ಡಾ.ಜಮುನಾ ರಾಣಿ ಮಿರ್ಲೆ ಬಹುಮಾನ ವಿತರಿಸಿ ವಿದ್ಯಾರ್ಥಿಗಳಿಗೆ ಹೇಗೆ ಸಾಧಕರಾಗಬೇಕೆಂಬುದರ ಬಗ್ಗೆ ಕಿವಿ ಮಾತು ಹೇಳಿದರು. ಮುಖ್ಯ ಶಿಕ್ಷಕಿ ಎಲ್. ಲತಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಖ್ಯಾತ ಗಾಯಕ ಹಾಗೂ ಸಂಗೀತ ಶಿಕ್ಷಕ ಉಮಾಪತಿ ಮತ್ತು ಕಾವೇರಿ ಬಳಗದ ಅಧ್ಯಕ್ಷೆ ಎನ್. ಕೆ.ಕಾವೇರಿಯಮ್ಮ ಅವರು ಕನ್ನಡ ಗೀತಾ ಗಾಯನ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರು ಜಿಲ್ಲಾ ಪ್ರೌಡ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರೂ ಆದ ಸಹ ಶಿಕ್ಷಕ ಎನ್.ನಾಗರಾಜು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಹಿರಣ್ಮಯಿ ಪ್ರತಿಷ್ಠಾನದ ಅಧಕ್ಷ ಎ.ಸಂಗಪ್ಪ , ಶಿಕ್ಷಕರಾದ ಕೆ. ಎಂ. ಮಹೇಶ್, ವಿನುತಾ ಬಗರೆ, ನೂರ್ ಸಲ್ಮಾಬಾನು ಹಾಗೂ ಪತ್ರಕರ್ತ ಕೆ.ಮಹೇಶ್ ಇನ್ನಿತರರಿದ್ದರು.