ವಿಶ್ವದಲ್ಲೇ ಮಾದರಿಯಾದ ಸಂವಿಧಾನವು ಸರ್ವಕಾಲಕ್ಕೂ ಉತ್ಕೃಷ್ಟ ಸಂವಿಧಾನವಾಗಿದ್ದು, ದೇಶದ ಪ್ರಜೆಗಳ ರಕ್ಷಣೆಯಲ್ಲಿ ಕಾವಲುಗಾರನಂತಿದೆ ಎಂದು ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಪ್ರಕಾಶ್ ಹೇಳಿದರು.
ಪಟ್ಟಣದ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹಾಗೂ ಸಂವಿಧಾನ ಪೀಠಿಕೆಯನ್ನು ಬೋಧಿಸಿ ಅವರು ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ದೂರದೃಷ್ಟಿ ಹಾಗೂ ಚಿಂತನೆಯ ಫಲವಾಗಿ ಭಾರತೀಯ ಸಂವಿಧಾನವು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಗೂ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಹಕ್ಕು, ಕರ್ತವ್ಯ ಹಾಗೂ ಬದ್ದತೆಯನ್ನ ನೀಡಿದ್ದು ರಾಷ್ಟ್ರತೆ, ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಭ್ರಾತೃತ್ವವನ್ನು ಬೆಳೆಸುವಂತಹ ಧೈಯವನ್ನು ಹೊಂದಿದೆ ಎಂದು ಬಣ್ಣಿಸಿದರು.
ಭಾರತೀಯ ಸಂವಿಧಾನವು ಪ್ರಪಂಚದಲ್ಲೇ ಅತೀ ದೊಡ್ಡ ಲಿಖಿತ ಸಂವಿಧಾನವಾಗಿದ್ದು, ಪ್ರತಿಯೊಬ್ಬರು ಸಂವಿಧಾನದಲ್ಲಿ ಪ್ರತಿಪಾದಿಸುವಂತಹ ಮೂಲಭೂತ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದರ ಮೂಲಕ ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧರಾಗಿ ದುಡಿಯುವ ಜೊತೆಗೆ ಸಂವಿಧಾನದ ಆಶಯದಂತೆ ನಡೆದುಕೊಂಡಾಗ ಮಾತ್ರ ಶಾಂತಿಪ್ರಿಯ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು.
ಈ ವೇಳೆ ಪ್ರಾಂಶುಪಾಲರಾದ ಯು.ಎಸ್.ಶಿವಕುಮಾರ್, ಉಪನ್ಯಾಸಕರುಗಳಾದ ಹೆಚ್.ಎಸ್.ಪಂಚಲಿಂಗೇಗೌಡ, ಜಿ. ಸುರೇಂದ್ರ, ಎನ್.ರೇವಣ್ಣ, ಪ್ರೇಮಕುಮಾರಿ, ಸಿ. ಜಯವರ್ಧನ್, ಜಿ.ಎಸ್. ನಂದಿನಿ, ಸ್ವಾತಿ, ಶಿವಕುಮಾರ್, ಸಂಜನ, ರಶ್ಮಿ, ಮೋಹನ್‌ಕುಮಾರ್ ಎಂ.ಟಿ, ಸೇರಿದಂತೆ ಇತರರು ಹಾಜರಿದ್ದರು.
