ಮೈಸೂರು : ಯಾವುದೇ ಒಂದು ದೇಶ ಅಥವಾ ರಾಜ್ಯದಲ್ಲಿ ವೈವಿಧ್ಯತೆ ಇದ್ದರಷ್ಟೇ ಆ ದೇಶ ಸಮೃದ್ಧಿಯಾಗಿರುತ್ತದೆ. ವೈವಿದ್ಯತೆಗಳು ನಾಶವಾದರೆ ದೇಶದ ಸಂಸ್ಕೃತಿಯೂ ನಾಶವಾಗುತ್ತದೆ ಎಂದು ಕೆ.ಆರ್.ನಗರ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ವಾಗ್ಮಿ ಪ್ರೊ. ಮೈಸೂರು ಕೃಷ್ಣಮೂರ್ತಿ ಹೇಳಿದರು.
ನಗರದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಏರ್ಪಡಿಸಿದ್ದ ೬೮ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಸಾಂಸ್ಕೃತಿಕ ವೈವಿದ್ಯತೆ ಜಗತ್ತಿನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಕರ್ನಾಟಕ ಒಂದು ಪುಟ್ಟ ಭಾರತವಾದರೆ, ಭಾರತ ಒಂದು ಪುಟ್ಟ ಜಗತ್ತಾಗಿದೆ. ನಮ್ಮಲ್ಲಿ ಎಲ್ಲ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ ಆಚರಣೆಗಳನ್ನು ಕಾಣಬಹುದು. ಇದರಿಂದಾಗಿಯೇ ದೇಶ ಸಮೃದ್ಧಿಯಾಗಿದೆ. ನಿಸರ್ಗದ ಸೊಬಗು ಉಳಿಯಲು ನಮಗೆ ಎಲ್ಲವೂ ಬೇಕು. ಕನ್ನಡ ಕೇವಲ ಕನ್ನಡಿಗಾರಿಗಾಗಿ ಅಲ್ಲ ಕನ್ನಡ ಈ ದೇಶಕ್ಕಾಗಿ ಮತ್ತು ವಿಶ್ವಕ್ಕಾಗಿ ಎಂದು ನಾವು ವಿಶಾಲವಾಶದ ಮನೋಭಾವ ಇಟ್ಟುಕೊಳ್ಳಬೇಕು. ಕನ್ನಡಕ್ಕೆ ಅಥವಾ ಕನ್ನಡಿಗರಿಗೆ ಧಕ್ಕೆಯಾದರೆ ಈ ದೇಶಕ್ಕೆ ಮತ್ತು ವಿಶ್ವಕ್ಕೆ ಧಕ್ಕೆಯಾದಂತೆ ಎಂದರು.
ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಎ.ಟಿ.ಸದೇಬೋಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರ ದೊಡ್ಡದು.ಅವರ ಕೊಡುಗೆ ಅಪಾರವಾಗಿದೆ. ಯುವ ಮನಸ್ಸುಗಳಿಗೆ ನಮ್ಮ ಪರಂಪರೆಯ ಪರಿಚಯ ಮಾಡಿಕೊಡುವುದು ನಮ್ಮಗಳ ಕರ್ತವ್ಯವಾಗಿದೆ. ಕನ್ನಡಿಗರು ಪರಧರ್ಮ ಸಹಿಷ್ಣುಗಳು. ಕನ್ನಡವನ್ನು ಅನ್ನದ ಭಾಷೆಯನ್ನಾಗಿ ರೂಪಿಸವುದು ನಮ್ಮ ಕರ್ತವ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೆಕ್ಟರ್ ಡಾ.ಬರ್ನಾಡ್ ಪ್ರಕಾಶ್ ಬಾರ್ನಿಸ್ ಅವರು ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದರೂ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಮತ್ತು ಗಣಕೀಕರಣದಿಂದ ಭಾಷೆಗೆ ಕುತ್ತುಂಟಾಗುತ್ತಿದೆ. ಅದನ್ನು ಬೆಳೆಸಿ, ಪೋಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ಡಾ.ರವಿ.ಜೆ.ಡಿ.ಸಲ್ಡಾನ ಉಪಸ್ಥಿತರಿದ್ದರು.