ಮೈಸೂರು: ಎಐಡಿಎಸ್‌ಓ ಮೈಸೂರು ಜಿಲ್ಲಾ ಸಮಿತಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಮೈಸೂರು ವಿಶ್ವ ವಿದ್ಯಾಲನಿಲಯದ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಮಹಾರಾಜ, ಗೌತಮ್, ಅಂಬೇಡ್ಕರ್ ಹಾಸ್ಟೆಲ್ನಲ್ಲಿ ಉತ್ತಮವಾದ ಆಹಾರ ಹಾಗೂ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಕ್ರಾಫರ್ಡ್ ಹಾಲ್ ಎದುರು ಪ್ರತಿಭಟನೆ ನಡೆಸಿದರು.
ಮಹಾರಾಜ ಕಾಲೇಜಿನ ಹಾಸ್ಟೆಲು ಗೌತಮ ಹಾಸ್ಟೆಲು ಹಾಗೂ ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ವಾಸವಿದ್ದಾರೆ. ಕಳೆದ ಒಂದು ವಾರದಿಂದ ಸರಿಯಾದಂತಹ ಆಹಾರ ವ್ಯವಸ್ಥೆ ಮಾಡಿಲ್ಲ, ಆಹಾರವನ್ನು ಪೂರೈಸುವ ಟೆಂಡರ್ದಾರರು ಸಾಮಗ್ರಿಗಳನ್ನು ಪೂರೈಸಿಲ್ಲ. ವಿದ್ಯಾರ್ಥಿಗಳಿಗೆ ಇದರಿಂದ ಬಹಳಷ್ಟು ತೊಂದರೆ ಉಂಟಾಗಿದೆ.
ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಅಸ್ವಚ್ಛತೆ ಹಾಗೂ ಸರಿಯಾದ ಊಟದ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಬಳಲುತ್ತಿದ್ದಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದರು ಕೂಡ ಯಾವುದೇ ಸಮಸ್ಯೆಗಳನ್ನು ಪರಿಹರಿಸದೇ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಈ ನಡೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಸ್ಥಳಕ್ಕೆ ಬಂದ ವಿಶ್ವವಿದ್ಯಾನಿಲಯದ ಡೀನ್ ಪ್ರೊಫೆಸರ್ ಚಂದ್ರಶೇಖರ್ ಅವರು ಮನವಿ ಪತ್ರವನ್ನು ಸ್ವೀಕರಿಸಿ ಎರಡು ದಿನದ ಒಳಗೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷ ಸುಭಾಷ್, ಪದಾಧಿಕಾರಿಗಳಾದ ನಿತಿನ್,ಬೀರಪ್ಪ, ಸತೀಶ್ ವಿದ್ಯಾರ್ಥಿಗಳಾದ ಅಭಿಷೇಕ್ , ಮಂಜುನಾಥ್, ಗೌತಮ್, ಹರೀಶ್ ಹಾಗೂ ಮಹಾರಾಜ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.