ಮದ್ದೂರು: ಪಟ್ಟಣದ ಶಿವಪುರದ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಸಹಾಯಧನ ಯೋಜನೆ ಅಡಿ ಹೈನುಗಾರಿಕೆಗೆ ರಬ್ಬರ್ ಮ್ಯಾಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಫಲಾನುಭವಿಗಳಿಗೆ ಮ್ಯಾಟ್ ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಕೆ.ಎಂ.ಉದಯ್, ಪ್ರತಿಯೊಬ್ಬರೂ ಕೂಡ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಹೈನುಗಾರಿಕೆ ನಡೆಸಬೇಕು ಹಸುಗಳಿಗೆ ಬಾವು ಆಗದಂತೆ ತಡೆಯಲು ಮ್ಯಾಟ್ ಸಹಾಯಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮ್ಯಾಟ್ ಗಳನ್ನು ವಿತರಿಸಲಾಗುವುದು ಎಂದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ನೂತನವಾಗಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ತಿಳಿಯಬೇಕಾದದ್ದು ಬಹಳಷ್ಟು ಇದೆ ಶಾಸಕನ ಕೆಲಸ ಏನೆಂದು ತಿಳಿದುಕೊಂಡು ಒಂದಷ್ಟು ಜನಗಳ ಸೇವೆಯನ್ನು ಮಾಡಿ ಆನಂತರ ಟೀಕಾಕಾರರಿಗೆ ಉತ್ತರಿಸೋಣ ಎಂದರು.
ಸರ್ಕಾರದ ನಿಗಮ ಮಂಡಳಿ ಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನ ನೇಮಿಸಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮಲ್ಲಿ ಯಾವುದೇ ರೀತಿಯಾದಂತಹ ಭಿನ್ನಾಭಿಪ್ರಾಯ ಇಲ್ಲ. ಡಿಕೆ ಶಿವಕುಮಾರ್ ಕೂಡ ನಮ್ಮ ನಾಯಕರೇ, ಸಿದ್ದರಾಮಯ್ಯ ಕೂಡ ನಮ್ಮ ಮುಖ್ಯಮಂತ್ರಿಗಳೇ ಎಲ್ಲವನ್ನ ಸಮಾಧಾನವಾಗಿ ಸಮನಾಗಿ ಎಲ್ಲರಿಗೂ ಹಂಚುತ್ತಾರೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದರು.
ನಾನು ಯಾವುದೇ ನಿಗಮ ಮಂಡಳಿಯ ಆಕಾಂಕ್ಷಿಯಲ್ಲ. ನಾನು ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದರು.
ಸಿದ್ದರಾಮಯ್ಯ ಅವರ ಜನತಾ ದರ್ಶನವನ್ನು ಟೀಕಿಸಿದ ಆರ್ ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅಶೋಕ್ ಒಬ್ಬ ಬೋಗಸ್ ಮನುಷ್ಯ. ಬಿಜೆಪಿ ಎಷ್ಟು ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು ಹಾಗೆಲ್ಲ ಉನ್ನತ ಸ್ಥಾನವನ್ನು ಪಕ್ಷ ನೀಡಿದೆ. ಒಕ್ಕಲಿಗರ ಪ್ರತಿನಿಧಿಯಾಗಿ ಎಲ್ಲಾ ಬಾರಿಯೂ ಸಚಿವರಾಗಿದ್ದಾರೆ. ಉಪಮುಖ್ಯಮಂತ್ರಿಯಾಗಿದ್ದಾರೆ ಆದರೆ ಅವರಿಂದ ಜನಾಂಗಕ್ಕೆ ಯಾವುದೇ ಕೊಡುಗೆ ಇಲ್ಲ ಎಂದು ತಿರುಗೇಟು ನೀಡಿದರು.
ಮಂಡ್ಯ ಜಿಲ್ಲಾ ಲೋಕಸಭಾ ಅಭ್ಯರ್ಥಿ ಸಂಬಂಧ ಸ್ಥಳೀಯ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಚರ್ಚಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದರು.