ಕೆ.ಆರ್.ನಗರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮರ್ಥವಾಗಿ ಜೀವನ ನಿರ್ವಹಣೆ ಮಾಡಲು ಶಿಕ್ಷಣ ಬಹಳ ಮುಖ್ಯವಾಗಿದ್ದು ಇದನ್ನು ವಿದ್ಯಾರ್ಥಿಗಳು ಮನಗಂಡು ಶಿಕ್ಷಿತರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಹೇಳಿದರು.
ತಾಲೂಕಿನ ಕೆಸ್ತೂರುಕೊಪ್ಪಲು ಗ್ರಾಮದ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ನಡೆಸುವ ಟೂಷನ್ ಕ್ಲಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಂತಹಾ ಸಂಘ ಸಂಸ್ಥೆಗಳು ಮತ್ತು ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಮಕ್ಕಳನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಮನೆಪಾಠ ಮಾಡುವ ಶಿಕ್ಷಕರು ಇಲ್ಲದಂತಾಗಿದ್ದು ಇದನ್ನು ಅರಿತ ಗ್ರಾಮಾಭಿವೃದ್ದಿ ಸಂಸ್ಥೆಯವರು ಶಾಲೆ ಅವಧಿ ಮುಗಿದ ನಂತರ ಅತಿಥಿ ಉಪನ್ಯಾಸಕರುಗಳಿಂದ ವಿಷಯವಾರು ಹತ್ತನೇ ತರಗತಿ ಮಕ್ಕಳಿಗೆ ಮೂರು ತಿಂಗಳ ಕಾಲ ಟೂಷನ್ ಕ್ಲಾಸ್ ನಡೆಸುತ್ತಾರೆ.
ವಿದ್ಯಾರ್ಥಿಗಳು ತಪ್ಪದೆ ಹಾಜರಾಗಿ ಈ ಬಾರಿ ಶೇ.೧೦೦ರಷ್ಟು ಫಲಿತಾಂಶ ಬರುವ ನಿಟ್ಟಿನಲ್ಲಿ ಅಧ್ಯಾಯನ ಮಾಡಬೇಕು ಎಂದು ಸಲಹೆ ನೀಡಿದರು.ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಗ್ರಾಮೀಣ ಜನರ ಉದ್ದಾರಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದರ ಜತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವ ಈ ರೀತಿಯ ಕಾರ್ಯಕ್ರಮ ಸೇರಿದಂತೆ ಬಡವರಿಗಾಗಿ ಉಪಯುಕ್ತವಾದ ಸವಲತ್ತುಗಳನ್ನು ನೀಡುತ್ತಿರುವುದರಿಂದ ಡಾ.ವೀರೇಂದ್ರ ಹೆಗ್ಗಡೆಯವರನ್ನು ಗ್ರಾಮೀಣ ಜನತೆ ಪೂಜ್ಯ ಮನೋಭಾವದಿಂದ ಕಾಣುತ್ತಿದ್ದಾರೆ ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯ ತಾಲೂಕು ಯೋಜನಾಧಿಕಾರಿ ರಮೇಶ್ ಮಾತನಾಡಿ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ತಿರುವಿನ ಘಟ್ಟವಾಗಿದ್ದು ಹಳ್ಳಿಯ ಮಕ್ಕಳು ಶಿಕ್ಷಿತರಾಗಬೇಕು ಎಂಬ ಉದ್ದೇಶದಿಂದ ಟೂಷನ್ ಕ್ಲಾಸ್‌ಗಳನ್ನು ಆರಂಭಿಸಲಾಗಿದ್ದು ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಅವಶ್ಯಕವಿರುವ ಎಂಟು ಶಾಲೆಗಳಿಗೆ ಶಿಕ್ಷಕರುಗಳನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ವತಿಯಿಂದ ರಾಜ್ಯದ ಒಂದು ಸಾವಿರ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಟೂಷನ್ ಕೊಡಿಸುವುದರ ಜತೆಗೆ ಶಾಲೆಗಳಿಗೆ ಪೀಠೋಪಕರಣಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ ಯೋಜನಾಧಿಕಾರಿಗಳು ಕಳೆದ ವರ್ಷ ಟೂಷನ್ ಕ್ಲಾಸ್ ಪಡೆದ ಹಂಪಾಪುರ ಮತ್ತು ಭೇರ್ಯ ಪ್ರೌಢಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದು ಹೇಳಿದರು.
ವೃತ್ತ್ತಿಪರ ತರಗತಿಗಳು ಸೇರಿದಂತೆ ಉನ್ನತ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದು ವಿದ್ಯಾರ್ಥಿಗಳ ಪೋಷಕರು ಗ್ರಾಮಾಭಿವೃದ್ದಿ ಯೋಜನೆಯ ಸಂಘದ ಸದಸ್ಯರಾಗಿರಬೇಕು ಅಂತಹವರ ಮಕ್ಕಳಿಗೆ ತಿಂಗಳಿಗೆ ಒಂದು ಸಾವಿರ ರೂಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ ರಮೇಶ್ ಸಂಸ್ಥೆ ವತಿಯಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾಲೇಜು ಪ್ರಾಂಶುಪಾಲ ನಾಗರಾಜು, ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರಭಾವತಿ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಶಿಕ್ಷಣ ಸಂಯೋಜಕ ಜಗದೀಶ್, ಶಾಲೆಯ ಮುಖ್ಯ ಶಿಕ್ಷಕ ಧನಂಜಯ, ಶಿಕ್ಷಕರಾದ ಮಹದೇವ್, ರೂಪ, ಗ್ರಾಮಾಭಿವೃದ್ದಿ ಸಂಸ್ಥೆಯ ಭವ್ಯ, ವೀಣಾ ಮತ್ತಿತರರು ಹಾಜರಿದ್ದರು.