ಮೈಸೂರು : ನಾಡಿನ ಹಿತಾಸಕ್ತಿ ವಿಷಯ ಬಂದಾಗ ಕನ್ನಡಿಗರು ಒಗ್ಗಟ್ಟಾಗುವುದಿಲ್ಲ. ನಮ್ಮಲ್ಲಿ ಅಸೂಯೆ, ಕಾಲೆಳೆಯುವುದು ಹೆಚ್ಚಾಗಿದೆ. ಇದು ಅತ್ಯಂತ ಶೋಚನೀಯ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಬೇಸರ ವ್ಯಕ್ತಪಡಿಸಿದರು.
ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿರುವ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿ, ಭೌಗೋಳಿಕವಾಗಿ, ಬೌತಿಕವಾಗಿ ನಾವು ಒಂದಾಗಿದ್ದೇವೆ ಅಷ್ಟೇ. ತಾತ್ವಿಕವಾಗಿ, ನೈತಿಕವಾಗಿ ನಾವಿನ್ನೂ ಒಂದಾಗಿಲ್ಲ. ನಮ್ಮಲ್ಲಿ ಭಾವೈಕ್ಯತೆಯ ಕೊರತೆ ಎದ್ದು ಕಾಣುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಕನ್ನಡ ಭಾಷೆ ಅಳಿದುಹೋಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ತಮಿಳಿಗರನ್ನು ನೋಡಿ ನಾವು ಕಲಿಯಬೇಕಿದೆ. ಅವರು ಯಾವುದೇ ಪಕ್ಷದಲ್ಲಿರಲಿ ನಾಡಿನ ಹಿತಾಸಕ್ತಿ ವಿಷಯದಲ್ಲಿ ಅವರ ಒಗ್ಗಟ್ಟು ಅನನ್ಯವಾಗಿದೆ. ತಮಿಳುನಾಡು ಹೊರತು ಪಡಿಸಿ ಬೇರೆಲ್ಲೂ ಆಯಾ ರಾಜ್ಯದ ಭಾಷೆಗೆ ಅತ್ಯಂತ ಹೆಚ್ಚು ಪ್ರಾಮುಖ್ಯತೆ ನೀಡುವುದು ಕಂಡು ಬರುವುದಿಲ್ಲ. ನಾನು ಇತ್ತೀಚೆಗೆ ಒರಿಸ್ಸಾ ರಾಜ್ಯಕ್ಕೆ ಹೋದಾಗ ಅಲ್ಲಿನ ನಾಮಫಕಗಳೆಲ್ಲಾ ಇಂಗ್ಲಿಷ್‌ಮಯವಾಗಿದ್ದವು. ಎಲ್ಲವೂ ಕನ್ನಡಮಯವಾದಾಯ ರಾಜ್ಯೋತ್ಸವಕ್ಕೆ ಅರ್ಥ ಬರುತ್ತದೆ. ಎಲ್ಲ ಭಾಷೆಗಳನ್ನೂ ನಾವು ಕಲಿಯುವುದು ತಪ್ಪಲ್ಲ ಆದರೇ, ನಮ್ಮ ಮಾತೃಭಷೆ ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಆಡಳಿತ ಮತ್ತು ಶಿಕ್ಷಣ ಕನ್ನಡ ಮಧ್ಯಮದಲ್ಲಾಗಬೇಕು. ಶಾಲೆ ಮತ್ತು ಕಾಲೇಜುಗಳಲ್ಲಿ ರಾಜ್ಯೋತ್ಸವ ಆಚರಣೆ ವಿಶೇಷವಲ್ಲ. ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೂ ರಾಜ್ಯೋತ್ಸವ ಕಾಲಿಟ್ಟಿರುವುದು ಅತ್ಯಂತ ಸಂತೋಷದ ವಿಷಯ ಎಂದರು.
ಮತ್ತೊಬ್ಬ ಸನ್ಮಾನಿತ ಚುಟುಕು ಸಾಹಿತಿ ಡಾ.ಎಂ.ಜಿ.ಆರ್.ಅರಸ್ ಮಾತನಾಡಿ, ಮೈಸೂರಿನಲ್ಲಿ ಕೈಗಾರಿಕಾ ಕ್ಷೇತ್ರ ಉನ್ನತ ಸ್ಥಾನದಲ್ಲಿ ಬೆಳೆಯಲು ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರು ಪ್ರಮುಖ ಕಾರಣಕರ್ತರು. ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಸದಾಕಾಲ ಅವರನ್ನು ಸ್ಮರಿಸುತ್ತಿರಬೇಕು. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ದೇವರಾಜ ಅರಸು ಅವರ ಪುತ್ಥಳಿ ನಿರ್ಮಾಣ ಮಾಡಬೇಕು ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ಕನ್ನಡಾಂಬೆ ಭಾವ ಚಿತ್ರಕ್ಕೆ ಪುಷ್ಪಾರ್ಷನೆ ಸಲ್ಲಿಸಿದರು. ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಆರ್.ಆನಂದ್ ಆಡಳಿತ ಮಂಡಳಿ ಸದಸ್ಯ ಅಚ್ಯುತ, ಮಹದೇವು ಮುಂತಾದವರು ಉಪಸ್ಥಿತರಿದ್ದರು.