ಹಾವೇರಿ: ಬರಗಾಲ ಸಮಯದಲ್ಲಿ ನರೇಗಾ ಯೋಜನೆಯಡಿ 150 ದಿನಗಳವರೆಗೆ ಕೆಲಸ ಕೊಡಬೇಕೆನ್ನುವ ನಿಯಮ ಇದ್ದರೂ ಕೇಂದ್ರ ಸರ್ಕಾರ ದುಡಿಮೆಯ ದಿನ ಹೆಚ್ಚಿಸಲು ಅನುಮತಿ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕಾಗಿನೆಲೆ ಹೆಲಿಪ್ಯಾಡ್ ನಲ್ಲಿ ಬುಧವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಮಾತ್ರ ಅಲ್ಲ, ದೇಶದ 12 ರಾಜ್ಯಗಳಲ್ಲಿ ಬರಗಾಲ ಆವರಿಸಿದೆ. ಇಂತಹ ಸಂದರ್ಭದಲ್ಲಿ ದುಡಿಯುವ ಜನರಿಗೆ ಹೆಚ್ಚಿನ ದುಡಿಯುವ ಅವಕಾಶಗಳನ್ನು ನೀಡಬೇಕಾಗಿದೆ. ನರೇಗಾ ಯೋಜನೆಯಡಿ ಈಗ ನೀಡಲಾಗುತ್ತಿರುವ 100 ದಿನಗಳ ಉದ್ಯೋಗವನ್ನು 150 ದಿನಗಳಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ, ಕೇಂದ್ರ ಸರ್ಕಾರ ಇದುವರೆಗೆ ಅನುಮತಿ ನೀಡಿಲ್ಲ ಎಂದು ಹೇಳಿದರು.
ಬರ ಪರಿಹಾರ ಕಾಮಗಾರಿಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ. ಆದರೆ, ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಇದುವರೆಗೆ ಒಂದು ಪೈಸೆಯೂ ಕೊಟ್ಟಿಲ್ಲ ಎಂದು ನುಡಿದರು.
ರಾಜ್ಯ ಕೊಟ್ಟಿರುವ ತೆರಿಗೆ ಹಣವನ್ನು ವಾಪಸ್ ನಮಗೆ ಕೊಡುತ್ತಿಲ್ಲ ಎಂದು ನುಡಿದರು.
ರಾಜ್ಯದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ನಿರಂತರ ಸಭೆ ನಡೆಸಿ, ಕಾಮಗಾರಿಗಳ ಮೇಲ್ವಿಚಾರಣೆ ನಡೆಸುವಂತೆ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರಿಗೂ ತಿಳಿಸಿದ್ದೇನೆ ಎಂದು ಹೇಳಿದರು.