ಮೈಸೂರು: ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದರೆ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ವರುಣ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ವರುಣಾ ಕ್ಷೇತ್ರದ ಗೆಜ್ಜಗನಹಳ್ಳಿ, ಹಾರೋಪುರ, ಸಾಲುಂಡಿ, ತಾಯೂರು, ಬೀರಿಹುಂಡಿ, ಈಶ್ವರಗೌಡನ ಹುಂಡಿ, ವಡ್ಡರಹುಂಡಿ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಚುನಾವಣೆ ಕಳೆದ ನಂತರ ಬರಲು ಸಾಧ್ಯವಾಗಿರಲಿಲ್ಲ. ಏಕೆಂದರೆ ನನಗೆ ಯಾವುದೇ ಸಾಂವಿಧಾನಿಕ ಹುದ್ದೆ ಇರಲಿಲ್ಲ. ಆದ್ದರಿಂದ ಈಗ ಬಂದು ನಿಮ್ಮ ಸಮಸ್ಯೆಗಳನ್ನು ಕೇಳುತ್ತಿದ್ದೇನೆ. ನಮ್ಮ ತಂದೆಯವರಿಗೆ ಹೆಚ್ಚಿನ ಬಹುಮತ ನೀಡಿ ಗೆಲ್ಲಿಸುವುದರ ಮೂಲಕ ೨ನೇ ಬಾರಿಗೆ ನಿಮ್ಮೆಲ್ಲರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿದ್ದಾರೆ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.

ಗೆಜ್ಜಗನಹಳ್ಳಿ ಗ್ರಾಮಕ್ಕೆ ಬಸ್‌ಗಳು ಸರಿಯಾಗಿ ಬರುತ್ತಿಲ್ಲ. ಶಾಲಾ ಮಕ್ಕಳಿಗೆ ತೊಂದರೆಯಾಗಿದೆ. ಶಕ್ತಿ ಯೋಜನೆ ಆದ ಮೇಲೆ ಈ ರೀತಿ ಆಗಿದೆ. ಮಳೆಯಿಂದ ಮನೆಗಳಿಗೆ ಹಾನಿಯಾಗಿದೆ ಪರಿಹಾರ ಕೊಡಿಸಿ, ಬೆಳೆ ಪರಿಹಾರ ಕೊಡಿಸಿ, ಕಾರ್ಖಾನೆಗಳಲ್ಲಿ ಕೆಲಸ ಕೊಡಿಸಿ, ನಿರುದ್ಯೋಗಿಗಳಾಗಿದ್ದೇವೆ ಸಾಲ ಕೊಡಿಸಿ, ಕೆರೆ ಹೂಳೆತ್ತಿ ಅಭಿವೃದ್ಧಿಪಡಿಸಿ, ವಿದ್ಯುತ್, ಟಿಸಿ ಹಾಕಿಸಿಕೊಡಿ, ರಸ್ತೆ ಮಾಡಿಸಿ ಕೊಡಿ, ಸಮುದಾಯ ಭವನ ನಿರ್ಮಿಸಿ ಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ಅದಕ್ಕೆ ಡಾ. ಯತೀಂದ್ರ ಉತ್ತರಿಸುತ್ತ ಕೆಎಸ್‌ಆರ್‌ಟಿಸಿ ಅಧಿಕಾರಿ ಕರೆದು ಬಸ್ ಸರಿಯಾದ ಸಮಯಕ್ಕೆ ಬರುವಂತೆ ಹಾಕಲು ಸೂಚಿಸಿದರು. ಇತರೆ ಎಲ್ಲಾ ಸಮಸ್ಯೆಗಳಿಗೆ ಆಯಾ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್‌ಕುಮಾರ್, ಇ.ಒ. ರಾಜೇಶ್, ಗ್ರಾಪಂ ಅಧ್ಯಕ್ಷೆ ಮಣಿಕೃಷ್ಣ, ಉಪಾಧ್ಯಕ್ಷೆ ಬಸಮ್ಮ, ಮಹಾದೇವ ಪ್ರಸಾದ್, ವಿಠಲ, ರಂಗಸ್ವಾಮಿ, ರಾಜೇಶ, ಕೆಂಪಣ್ಣ ಹಾಜರಿದ್ದರು.