ಗುಂಡ್ಲುಪೇಟೆ: ಗ್ರಾಮೀಣ ಭಾಗದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಸುಧಾರಿಸಿದರೆ ದೇಶಕ್ಕೆ ದೊಡ್ಡ ಕೊಡುಗೆ ನೀಡದಂತಾಗುತ್ತದೆ ಎಂದು ರೈತ ಸಂಘಟನೆ ಜಿಲ್ಲಾ ಉಪಾಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯ ಶಿವಪುರ ಮಹದೇವಪ್ಪ ಹೇಳಿದರು.
ತಾಲೂಕಿನ ಶಿವಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮತ್ತು ಗ್ರಾಮೀಣ ಮತ್ತು ಆರೋಗ್ಯ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಜನರಿಗೆ ಶಿಕ್ಷಣ ಮತ್ತು ಆರೋಗ್ಯದ ಅರಿವಿನ ಮೂಲಕ ಸಮಗ್ರ ಅಭಿವೃದ್ಧಿಗೆ ದಿಸೆಯಲ್ಲಿ ಹೆಜ್ಜೆ ಇಡಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ಗ್ರಾಮೀಣ ಭಾಗದ ಜನಾಭಿವೃದ್ಧಿ, ಮಕ್ಕಳ ಅಭಿವೃದ್ಧಿ, ಯುವಜನರು, ಮಹಿಳೆಯರು, ಮತ್ತು ಸಮುದಾಯ ಆರೋಗ್ಯ ಮತ್ತು ಶಿಕ್ಷಣ ಕಾರ್ಯಕ್ರಮಗಳು ಹಾಗೂ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಬೀದಿ ಮಕ್ಕಳ ಪುನರ್ವಸತಿ, ಮಕ್ಕಳ ಹಕ್ಕುಗಳು, ಗುಣಮಟ್ಟದ ಶಿಕ್ಷಣಕ್ಕಾಗಿ, ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು, ಮಕ್ಕಳಿಗೆ ರಕ್ಷಣೆ ಮತ್ತು ನೀಡುವುದು ಹೀಗೆ ಹಲವಾರು ಜವಬ್ದಾರಿಗಳು ನಮ್ಮ ಮೇಲಿವೆ. ಗ್ರಾಮೀಣ ಮತ್ತು ಆರೊಗ್ಯ ಸಂಸ್ಥೆ ಈ ದಿಸೆಯಲ್ಲಿ ತೊಡಗಿಸಿಕೊಂಡಿದೆ. ಜನ ಸಂಪರ್ಕದ ಮೂಲಕ ಜನರಿಗೆ ಮಾಹಿತಿ ನೀಡುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ಪ್ರತಿಯೊಬ್ಬರು ಇದಕ್ಕಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಚನ್ನಬಸಪ್ಪ, ಬಸಮ್ಮಣಮ್ಮ, ಆರೋಗ್ಯ ಇಲಾಖೆಯ ಚಂದನ್, ಬಿಲ್‍ಕಲೆಕ್ಟರ್ ಸಿದ್ದಯ್ಯ, ಗ್ರಾಮೀಣ ಮತ್ತು ಆರೋಗ್ಯ ಸಂಸ್ಥೆಯ ಲಿಂಗರಾಜು, ಸುಧಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.