ಪಿರಿಯಾಪಟ್ಟಣ: ಪಿರಿಯಾಪಟ್ಟಣ ಸಾರಿಗೆ ಘಟಕ ನಿರ್ವಾಹಕ ಎಸ್.ಆನಂದ್ ಕರ್ತವ್ಯದ ವೇಳೆ ಬಸ್ ನಲ್ಲಿ ದೊರೆತ ಅಂದಾಜು 75 ಗ್ರಾಂ ಚಿನ್ನದ ಒಡವೆಗಳನ್ನು ವಾರಸುದಾರರನ್ನು ಹುಡುಕಿ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಪಿರಿಯಾಪಟ್ಟಣ ಸಾರಿಗೆ ಘಟಕದ ವಾಹನ ಸಂಖ್ಯೆ KA-09 F-310 ರಲ್ಲಿ ಚಾಲಕ ವಸಂತ್ ಅವರೊಂದಿಗೆ ರಾವಂದೂರು ಪಿರಿಯಾಪಟ್ಟಣ ಮಾರ್ಗವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮಹಿಳಾ ಪ್ರಯಾಣಿಕರೊಬ್ಬರ ಪರ್ಸ್ ಬಿಲ್ಲೆ ಸಂಖ್ಯೆ 3056/154 ಚಾಲಕ ಕಂ ನಿರ್ವಾಹಕ ಎಸ್.ಆನಂದ್ ಅವರಿಗೆ ಸಿಕ್ಕಿದೆ ಪರ್ಸ್ ತೆರೆದು ನೋಡಿದಾಗ ಮಹಿಳೆಯೊಬ್ಬರ ವೋಟರ್ ಐಡಿ, 40ಗ್ರಾಮ್ ಚಿನ್ನದ ಮಾಂಗಲ್ಯ ಸರ, 20ಗ್ರಾಮ್ ಚಿನ್ನದ ಚೈನ್, 15ಗ್ರಾಮ್ ಚಿನ್ನದ ಓಲೆ ಮತ್ತು ಜುಮಕಿ ಹಾಗೂ 1 ಸಾವಿರ ಹಣ ಕಂಡುಬಂದಿದೆ.
ಪರ್ಸ್ ನಲ್ಲಿ ದೊರೆತಿದ್ದ ವೋಟರ್ ಐಡಿ ಮುಖಾಂತರ ಪರ್ಸ್ ಕಳೆದುಕೊಂಡಿದ್ದವರು ಪಿರಿಯಾಪಟ್ಟಣ ತಾಲೂಕಿನ ಕಂದೇಗಾಲ ಗ್ರಾಮದ ಮಹಿಳೆ ಎಂದು ಕಂಡುಹಿಡಿದು ಗೊತ್ತಿರುವವರ ಮುಖಾಂತರ ಅವರ ಮೊಬೈಲ್ ನಂಬರ್ ಪಡೆದುಕೊಂಡು ಪಿರಿಯಾಪಟ್ಟಣ ಬಸ್ ನಿಲ್ದಾಣದ ಸಂಚಾರ ನಿಯಂತ್ರಕರ ಕಚೇರಿಗೆ ಬರುವಂತೆ ತಿಳಿಸಿದ್ದಾರೆ. ಬಳಿಕ ಆ ಮಹಿಳೆ ಕಳೆದುಕೊಂಡಿದ್ದ ವಸ್ತುಗಳ ಬಗ್ಗೆ ನಿಖರ ಮಾಹಿತಿ ನೀಡಿದಾಗ ಮತ್ತು ವೋಟರ್ ಐಡಿಯಲ್ಲಿನ ವಿಳಾಸ ಖಚಿತಪಡಿಸಿಕೊಂಡು ಸಂಚಾರ ನಿಯಂತ್ರಕರಾದ ಶ್ರೀಧರ್ ಹಾಗೂ ಸುರೇಶ್ ಅವರ ಮುಖಾಂತರ ಮಹಿಳೆಗೆ ಪರ್ಸ್ ಹಿಂದಿರುಗಿಸಿ ಮಾನವೀಯತೆ ಜೊತೆಗೆ ಪ್ರಾಮಾಣಿಕತೆ ಮೆರೆದಿದ್ದಾರೆ.
ಕಳೆದು ಹೋಗಿದ್ದ ಪರ್ಸ್ ಸಿಕ್ಕ ಖುಷಿಯಲ್ಲಿ ಮಹಿಳೆ ನಿರ್ವಾಹಕ ಎಸ್.ಆನಂದ್ ಸೇರಿದಂತೆ ಚಾಲಕ ವಸಂತ್ ಮತ್ತು ಸಂಚಾರ ನಿಯಂತ್ರಕರಿಗೆ ಧನ್ಯವಾದ ಹೇಳಿದರು, ಅಂದಾಜು ನಾಲ್ಕುವರೆ ಲಕ್ಷ ಬೆಲೆಬಾಳುವ ಚಿನ್ನದ ಒಡವೆಗಳನ್ನು ವಾರಸುದಾರರನ್ನು ಕಂಡುಹಿಡಿದು ಹಿಂದಿರುಗಿಸಿದ ಸಾರಿಗೆ ಸಂಸ್ಥೆಯ ಸಿಬ್ಬಂದಿ ಎಸ್.ಆನಂದ್ ಕಾರ್ಯಕ್ಕೆ ಪಿರಿಯಾಪಟ್ಟಣ ಸಾರಿಗೆ ಘಟಕ ವ್ಯವಸ್ಥಾಪಕ ದರ್ಶನ್ ರಾಮಚಂದ್, ಸಂಚಾರ ನಿಯಂತ್ರಕರಾದ ಶಿವಕುಮಾರ್, ರಘು ಸೇರಿದಂತೆ ಚಾಲಕ ನಿರ್ವಾಹಕ ತಾಂತ್ರಿಕ ಹಾಗೂ ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.