Tuesday, April 22, 2025
Google search engine

Homeರಾಜ್ಯರಾಜ್ಯದ ನಗರ, ಪಟ್ಟಣದ ಸ್ಥಿರಾಸ್ತಿಗಳಿಗೆ ಇ-ಖಾತಾ ನೀಡಿಕೆ ಕುರಿತು ಈಶ್ವರ ಖಂಡ್ರೆ ಸಮಾಲೋಚನೆ

ರಾಜ್ಯದ ನಗರ, ಪಟ್ಟಣದ ಸ್ಥಿರಾಸ್ತಿಗಳಿಗೆ ಇ-ಖಾತಾ ನೀಡಿಕೆ ಕುರಿತು ಈಶ್ವರ ಖಂಡ್ರೆ ಸಮಾಲೋಚನೆ

ಭಾಲ್ಕಿ: ರಾಜ್ಯದ ಎಲ್ಲ ನಗರ, ಪಟ್ಟಣಗಳಲ್ಲಿನ ಕಟ್ಟಡಗಳಿಗೆ ಇ-ಖಾತೆ ನೀಡುವ ಮತ್ತು ಕಂದಾಯ ಭೂಮಿಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಿಸಿರುವ ಕಟ್ಟಡಗಳಿಗೆ ತೆರಿಗೆ ವಿಧಿಸುವ ಕುರಿತಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಹಿರಿಯ ಐ.ಎ.ಎಸ್. ಅಧಿಕಾರಿ ಮುನೀಶ್ ಮೌದ್ಗಿಲ್ ಅವರೊಂದಿಗೆ ಪರಾಮರ್ಶೆ ನಡೆಸಿದರು.

ಬಿಬಿಎಂಪಿ ಕಾಯ್ದೆ 2020ರ ಕಲಂ 144(6) ಮತ್ತು (21)ರ ಅಂಶಗಳನ್ನು ರಾಜ್ಯದ ಇತರ ಮಹಾನಗರ ಪಾಲಿಕೆಗಳಿಗೆ /ನಗರ ಸ್ಥಳೀಯ ಸಂಸ್ಥೆಗಳಿಗೆ ಸಹ ವಿಸ್ತರಣೆ ಮಾಡುವ ಸಂಬಂಧ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಹಾಗೂ ಕರ್ನಾಟಕ ಪುರಸಭೆ ಕಾಯ್ದೆ 1964ರಲ್ಲಿ ಅಳವಡಿಸಿಕೊಳ್ಳುವ ಕುರಿತ ಸಾಧಕ-ಬಾಧಕ ಪರಿಶೀಲಿಸಲು ಸೂಕ್ತ ತೀರ್ಮಾನ ಕೈಗೊಳ್ಳುವ ಸಲುವಾಗಿ ರಚಿಸಲಾಗಿರುವ ಉಪಸಮಿತಿಯ ಅಧ್ಯಕ್ಷರೂ ಆಗಿರುವ ಈಶ್ವರ ಖಂಡ್ರೆ, ಎಲ್ಲ ಸ್ಥಿರಾಸ್ತಿಗಳಿಗೆ ಇ-ಖಾತಾ ನೀಡುವ ನಿಟ್ಟಿನಲ್ಲಿ ಸಿದ್ಧವಾಗಿರುವ ತಂತ್ರಾಂಶದ ಬಗ್ಗೆಯೂ ಮಾಹಿತಿ ಪಡೆದರು.

ಪ್ರಸ್ತುತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 54.91 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈ ಪೈಕಿ ಸುಮಾರು 20.55 ಲಕ್ಷ ಅಧಿಕೃತ ಆಸ್ತಿಗಳಾಗಿದ್ದು ತೆರಿಗೆ ಪಾವತಿಸುತ್ತಿದ್ದರೆ, ಅನಧಿಕೃತವಾದ 34.35ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಯಾವುದೇ ತೆರಿಗೆ ವಿಧಿಸಲಾಗುತ್ತಿಲ್ಲ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ನಕ್ಷೆ ಅನುಮೋದನೆ ಇಲ್ಲದೆ ನಿರ್ಮಿಸಿರುವ ಬಡಾವಣೆ ಮತ್ತು ಕಟ್ಟಡಗಳಿಗೆ ಬಿ ಖಾತೆ ನೀಡಿ, ವಾರ್ಷಿಕ ಕಂದಾಯ ಕಟ್ಟಿಸಿಕೊಳ್ಳುತ್ತಿರುವ ರೀತಿಯಲ್ಲೇ ರಾಜ್ಯದ ಇತರ ನಗರ ಪಟ್ಟಣಗಳ ಸ್ವತ್ತುಗಳಿಗೆ ತೆರಿಗೆ ಮತ್ತು ದಂಡ ವಿಧಿಸುವ ಕುರಿತಂತೆ ಈಗಾಗಲೇ ಉಪ ಸಮಿತಿಯ ಸಭೆಯಲ್ಲಿ ಚರ್ಚಿತವಾಗಿರುವ ವಿಷಯಗಳ ಕಾನೂನಾತ್ಮಕ ವಿಚಾರಗಳ ಬಗ್ಗೆಯೂ ಮಾಹಿತಿ ಪಡೆದರು.

ನಕ್ಷೆ ಮಂಜೂರಾತಿ ಇಲ್ಲದ ಕಟ್ಟಡಗಳು ಮತ್ತು ಅನುಮೋದನೆ ಇಲ್ಲದ ಬಡಾವಣೆಗಳಲ್ಲಿನ ವಸತಿಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ಕುಡಿಯುವ ನೀರು, ರಸ್ತೆ, ವಿದ್ಯುತ್, ಬೀದಿ ದೀಪಗಳ ಸೌಲಭ್ಯ ಕಲ್ಪಿಸಲಾಗಿದ್ದರೂ, ಅವರಿಂದ ಯಾವುದೇ ತೆರಿಗೆ ಬಾರದ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದು, ಶ್ರೀಸಾಮಾನ್ಯರಿಗೂ ಹೊರೆ ಆಗದ ರೀತಿಯಲ್ಲಿ ಪರಿಹಾರೋಪಾಯಗಳ ಕುರಿತಂತೆ ಸಮಾಲೋಚಿಸಿದರು.

ಯಾವುದೇ ಸ್ವತ್ತಿನ ಮಾರಾಟ ಮಾಡುವಾಗ ಕಾವೇರಿ ತಂತ್ರಾಂಶದಲ್ಲಿ ಖಾತೆ ಇಲ್ಲದೆ ವಹಿವಾಟು ಸಾಧ್ಯವಿಲ್ಲ. ಹೀಗಾಗಿ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿರುವವರು, ನಿವೇಶನ ಹೊಂದಿರುವವರು ಅಕ್ರಮವಾಗಿ ಖಾತೆ ಪಡೆಯುತ್ತಿದ್ದು, ಇದು ಭ್ರಷ್ಟಾಚಾರಕ್ಕೆ ಆಸ್ಪದ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸ್ವತ್ತುಗಳಿಗೂ ಬಿ ಖಾತೆಯ ರೀತಿಯಲ್ಲಿ ಹೇಗೆ ಖಾತೆ ನೀಡುವ ಸಾಧ್ಯತೆಗಳ ಕುರಿತಂತೆ ಚರ್ಚಿಸಿದರು.

ಬೀದರ್ ಜಿಲ್ಲಾಡಳಿತ ಸಂಕೀರ್ಣ, ಕ್ರೀಡಾಂಗಣದ ಬಗ್ಗೆಯೂ ಚರ್ಚೆ

ಬೀದರ್ ಜಿಲ್ಲಾ ಕೇಂದ್ರದಲ್ಲಿ ನೂತನ ಜಿಲ್ಲಾಡಳಿತ ಸಂಕೀರ್ಣ ಮತ್ತು ಕ್ರೀಡೆಯ ಪ್ರೋತ್ಸಾಹಕ್ಕಾಗಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಕುರಿತಂತೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರಿಂದ ಹಿರಿಯ ಐ.ಎ.ಎಸ್. ಅಧಿಕಾರಿ ಮುನೀಶ್ ಮೌದ್ಗಿಲ್ ಅವರೊಂದಿಗೆ ಪರಾಮರ್ಶೆ ನಡೆಸಿದರು. 

ಬೀದರ್  ಜಿಲ್ಲಾ ಕೇಂದ್ರಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ಬರುವ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯಬಾರದು, ಎಲ್ಲ ಇಲಾಖೆಗಳ ಸೇವೆಯೂ ಒಂದೇ ಕಟ್ಟಡದಲ್ಲಿ ಲಭ್ಯವಾಗುವಂತಿರಬೇಕು. ಜೊತೆಗೆ ಆಧುನಿಕ ತಂತ್ರಜ್ಞಾನದ ನೆರವಿನಿಂದ ಸುಸಜ್ಜಿತ ಕಟ್ಟಡದಲ್ಲಿ ಸುಗಮ ಆಡಳಿತ  ನಡೆಯುವಂತಾಗಬೇಕು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಕೀರ್ಣದ ಸ್ವರೂಪ ಹೇಗಿರಬೇಕು ಎಂಬ ಬಗ್ಗೆಯೂ ಚರ್ಚಿಸಿದರು.

ಭಾರತದ ಯುವಜನರು ಒಲಿಂಪಿಕ್ಸ್, ಪ್ಯಾರಾಲಂಪಿಕ್ಸ್ ಮತ್ತು ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತರುತ್ತಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದ ಬೀದರ್ ಜಿಲ್ಲೆಯಲ್ಲಿ ಕೂಡ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣದ ರೂಪುರೇಷೆಗಳ ಬಗ್ಗೆಯೂ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.

RELATED ARTICLES
- Advertisment -
Google search engine

Most Popular