ರಾಮನಗರ: ಕನಕದಾಸರ ಸಂದೇಶಗಳು ಮನುಕುಲಕ್ಕೆ ಶ್ರೇಷ್ಟ ಸಂದೇಶ, ಅವುಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ಆಯೋಜಿಸಿದ್ದ ಸಂತ ಶ್ರೇಷ್ಟ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಪಾಟಿಸಿ ನಂತರ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ೧೫ – ೧೬ ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ವಿರುದ್ದ ಹೋರಾಟ ಮಾಡಿದವರು ಭಕ್ತ ಕನಕದಾಸರು ಎಂದರು. ಇವರು ಕೃಷ್ಣನ ಭಕ್ತರಾಗಿದ್ದರು, ಕನಕದಾಸರು ಒಂದು ಜಾತಿಗೆ ಸೀಮಿತವಾಗಿರಲಿಲ್ಲ ಆದುದರಿಂದ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದರು. ಉಪನ್ಯಾಸಕರಾದ ಬ್ಯಾಡರಹಳ್ಳಿ ಶಿವರಾಜ್ ಅವರು ಮಾತನಾಡಿ, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ೧೫೦೯ರಲ್ಲಿ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಕನಕದಾಸರು ಜನಿಸಿದರು. ಕನಕದಾಸರು ಯಾವುದೇ ಒಂದು ಜನಾಂಗ ಮತ್ತು ಧರ್ಮಕ್ಕೆ ಸೀಮಿತಿವಾದವರಲ್ಲ, ಅವರ ಕೀರ್ತನೆಗಳು ಸರ್ವ ಧರ್ಮದ ಬಗ್ಗೆ ತಿಳಿಸುತ್ತದೆ . ಒಂದು ಸಾಹಿತ್ಯ ಒಂದು ಧರ್ಮದ ಪರ ಇದ್ದರೆ ಅದು ಸಾಹಿತ್ಯವಾಗುವುದಿಲ್ಲ ಎಂದು ತಿಳಿಸಿದರು.
ನಮ್ಮ ಜಾತಿಯೇ ಶ್ರೇಷ್ಟ ಎಂದು ಹೇಳುವ ಈಗಿನ ಕಾಲದಲ್ಲಿ ,ವಿದೇಶಿ ಕವಿ ಜಾನ್ ಮಿಂಟ್ ವಾಟರ್ ಪ್ರಕಾರ ದೇಶದಲ್ಲಿ ಕವಿಯಾಗಿ ಜನಿಸುವುದು ವೀರಳ, ದಾರ್ಶನಿಕನಾಗಿ ಜನಿಸುವುದು ಇನ್ನು ವಿರಳ, ಒಬ್ಬನೇ ವ್ಯಕ್ತಿ ಕವಿಯಾಗಿ ದಾರ್ಶನಿಕನಾಗಿ ಜನಿಸಿರುವುದು ಅತ್ಯಂತ ವೀರಳ ಅಂತಹ ಗುಣಗಳನ್ನು ಹೊಂದಿರುವ ಕನಕದಾಸರು ಅತ್ಯಂತ ವೀರಳವೆಂದು ತಿಳಿಸಿದ್ದಾರೆ ಎಂದರು. ೧೫-೧೬ ನೇ ಶತಮಾನದಲ್ಲಿ ಭಕ್ತಿ ಪರಂಪರೆ ಹೆಚ್ಚು ಇತ್ತು, ಭಕ್ತಿ ಎಂಬುದು ಗರಗಸ ಇದ್ದಂತೆ, ಭಕ್ತಿಯು ಗುಡಿ ಗೋಪುರಗಳಲ್ಲಿರುವುದಿಲ್ಲ ಅದು ನಮ್ಮ ಮನಸ್ಸಿನಲ್ಲಿ ಇರುವಂತೆ ತಿಳಿಸಿದ್ದಾರೆ. ಕನಕದಾಸರಿಗೆ ಕೃಷ್ಣ ತುಂಬಾ ಪ್ರಿಯವಾದ ದೇವರು ಎಂದರು.

ಕಾರ್ಯಕ್ರಮದಲ್ಲಿ ಚಂದ್ರ ಶೇಖರ್ ರವರು ನಾಡಗೀತೆಯನ್ನು ಪ್ರಸ್ತುತಿಪಡಿಸಿದರು ಮತ್ತು ಅಂಕನಹಳ್ಳಿ ಪಾರ್ಥ ರವರು ನಿರೂಪಣೆ ಮಾಡಿದರು. ಅಪರ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್, ಡಿವೈಎಸ್ ಪಿ ದಿನಕರ್ ಶೆಟ್ಟಿ , ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ರಮ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಮೇಶ್ ಬಾಬು , ಕರ್ನಾಟಕ ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷರಾದ ರೇಣುಕಪ್ಪ,ಸಿದ್ದಯ್ಯ, ಹರಳಪ್ಪ , ಉಮೇಶ್ , ನಾಗೇಶ್ ಹಾಗೂ ಸಮುದಾಯದ ಇತರ ಮುಖಂಡರುಗಳು ಉಪಸ್ಥಿತರಿದ್ದರು.