ಮಂಡ್ಯ : ರಾಜ್ಯವನ್ನೆ ತಲ್ಲಣಗೊಳಿಸಿದ ಭ್ರೂಣ ಹತ್ಯೆ ಜಾಲ ಪತ್ತೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಲೇ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಂಡ್ಯ, ಮೈಸೂರಿಗೆ ದೌಡಾಯಿಸಿ, ಅಕ್ರಮ ನಡೆದಿರುವ ಸ್ಥಳಗಳ ಪರಿಶೀಲನೆ ನಡೆಸಿದ ಬೆನ್ನಲ್ಲೆ, ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಝೂಮ್ ಮೀಟಿಂಗ್ ನಡೆಸಿದರು.
ಈ ಮಧ್ಯೆ ಭ್ರೂಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ಭ್ರೂಣ ಪತ್ತೆ ಮಾಡಲು ಚೀನಾದಿಂದ ಮೊಬೈಲ್ ಸ್ಕ್ಯಾನರ್ ತರಿಸಿರುವ ಬಗ್ಗೆ ಮಾ ಹಿತಿ ತಿಳಿದುಬಂದಿದೆ.
`ಚೀನಾದಿಂದ ತರಿಸಿದ, ಬ್ಯಾಗ್‌ನಲ್ಲಿ ಸಾಗಿಸಬಹುದಾದ ಮೊಬೈಲ್ ಸ್ಕ್ಯಾನಿಂಗ್ ಯಂತ್ರವನ್ನು ಆರೋಪಿಗಳು ಬಳಸುತ್ತಿದ್ದರು. ಸ್ಕ್ಯಾನಿಂಗ್ ಯಂತ್ರದ ವಯರ್ ಅನ್ನು ಮಾನಿಟರ್‌ಗೆ ಅಳವಡಿಸಿ, ಉಪಕರಣವನ್ನು ಗರ್ಭಿಣಿಯ ಹೊಟ್ಟೆಯ ಮೇಲೆ ಇಟ್ಟು ಲಿಂಗಪತ್ತೆ ಮಾಡುತ್ತಿದ್ದರು. ಅದರಲ್ಲಿ ಯಾವುದೇ ಮಾಹಿತಿ ದಾಖಲಾಗುತ್ತಿರಲಿಲ್ಲ. ಆದರೆ, ದೇಶದಲ್ಲಿ ನೋಂದಾಯಿತ ಸ್ಕ್ಯಾನಿಂಗ್ ಯಂತ್ರದಲ್ಲಿ, ಸ್ಕ್ಯಾನಿಂಗ್ ಆದ ಪ್ರಕರಣಗಳ ಮಾಹಿತಿ ದಾಖಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.
ಆಲೆಮನೆಯಲ್ಲಿದ್ದ ೪ ಕೊಠಡಿಯಲ್ಲಿ ಮಹಿಳೆಯರನ್ನು ಕೂರಿಸುತ್ತಿದ್ದರು. ಮತ್ತೊಂದು ಕೊಠಡಿಯಲ್ಲಿ ಒಬ್ಬೊಬ್ಬರನ್ನೇ ಸ್ಕ್ಯಾನಿಂಗ್ ಮಾಡುತ್ತಿದ್ದರು. ಮಾತ್ರೆಯಲ್ಲೇ ಭ್ರೂಣ ಕರಗಿಸಬಹುದಾಗಿದ್ದರೆ ಗರ್ಭಿಣಿಯರಿಗೆ ಮಾತ್ರೆ ಕೊಟ್ಟು ಕಳುಹಿಸುತ್ತಿದ್ದರು. ಕ್ಲಿಷ್ಟವೆನಿಸುವ ಪ್ರಕರಣಗಳನ್ನು ಚೀಟಿಯಲ್ಲಿ ಬರೆದುಕೊಟ್ಟು ಮೈಸೂರಿನ ಆಸ್ಪತ್ರೆಯೊಂದಕ್ಕೆ ಕಳುಹಿಸುತ್ತಿದ್ದರು’ ಎಂದು ಬಿಹಾರ ಮೂಲದ ಕಾರ್ಮಿಕರು ತಿಳಿಸಿದ್ದಾರೆ.