Sunday, April 20, 2025
Google search engine

Homeಅಪರಾಧಯುವ ವಕೀಲನ ಮೇಲೆ ಹಲ್ಲೆ: ಚಿಕ್ಕಮಗಳೂರು ಪಿಎಸ್‌ ಐ ಸೇರಿದಂತೆ ಆರು ಪೊಲೀಸರ ಅಮಾನತು

ಯುವ ವಕೀಲನ ಮೇಲೆ ಹಲ್ಲೆ: ಚಿಕ್ಕಮಗಳೂರು ಪಿಎಸ್‌ ಐ ಸೇರಿದಂತೆ ಆರು ಪೊಲೀಸರ ಅಮಾನತು

ಚಿಕ್ಕಮಗಳೂರು: ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್‌ ಧರಿಸದೇ ಬಂದ ಯುವ ವಕೀಲನ ಮೇಲೆ ಪೊಲೀಸರು ಮನಸೋಇಚ್ಛೆ ಹಲ್ಲೆ ನಡೆಸಿದ್ದು, ಪ್ರಕರಣದ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಪಿಎಸ್‌ ಐ ಮಹೇಶ್ ಪೂಜಾರಿ ಸೇರಿ ಆರು ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ವಕೀಲ ಪ್ರೀತಂ ಅವರು ಗುರುವಾರ ರಾತ್ರಿ ಹೆಲ್ಮೆಟ್‌ ಇಲ್ಲದೆ ಮಾರ್ಕೇಟ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಠಾಣೆಯ ಎದುರು ಅಡ್ಡಗಟ್ಟಿದ ಪೊಲೀಸರು, ಅವರ ಬೈಕ್‌ ನಿಂದ ಕೀ ಕಸಿದುಕೊಂಡಿದ್ದಾರೆ.

ಹೆಲ್ಮೆಟ್ ಹಾಕದಿರುವುದಕ್ಕೆ ದಂಡ ಕಟ್ಟುತ್ತೇನೆ, ಕೀ ಕಸಿದುಕೊಳ್ಳಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ಪ್ರೀತಂ ಪ್ರಶ್ನಿಸಿದ್ದಾರೆ. ಅಲ್ಲದೇ ಅದನ್ನು ವಿಡಿಯೊ ಮಾಡಿಕೊಂಡಿದ್ದಾರೆ.

ಬಳಿಕ ಪೊಲೀಸರು ಪ್ರೀತಂ ಅವರನ್ನು ಠಾಣೆಯ ಒಳಗೆ ಕರೆದೊಯ್ದಿದ್ದಾರೆ. ಕಂಪ್ಯೂಟರ್ ಕೊಠಡಿಯಲ್ಲಿ ಕೂಡಿ ಹಾಕಿ ಮನ ಬಂದಂತೆ ದೊಣ್ಣೆ, ಲಾಠಿ, ಪೈಪ್‌ ನಿಂದ ಹಲ್ಲೆ ನಡೆಸಿದರು. ಕಾಲಿನಿಂದಲೂ ತುಳಿದರು ಎಂದು ಪ್ರೀತಂ ದೂರಿದರು.

ಅಷ್ಟರಲ್ಲಿ ವಿಷಯ ತಿಳಿದು ಹಲವು ವಕೀಲರು ಠಾಣೆಯ ಎದುರು ಜಮಾಯಿಸಿದರು. ಬಳಿಕ ಪ್ರೀತಂ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅವರ ಎದೆ, ಕೈ ಮತ್ತು ಬೆನ್ನಿಗೆ ಸಾಕಷ್ಟು ಗಾಯಗಳಾಗಿದ್ದು, ಇದು ವಕೀಲ ಸಮೂಹವನ್ನು ಇನ್ನಷ್ಟು ಕೆರಳುವಂತೆ ಮಾಡಿತು.

ರಾತ್ರಿಯಿಡಿ ಠಾಣೆಯ ಎದುರು ಧರಣಿ ನಡೆಸಿ, ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಪೊಲೀಸ್ ಹಿರಿಯ ಅಧಿಕಾರಿಗಳು ವಕೀಲರನ್ನು ಸಮಾಧಾನಪಡಿಸಲು ಯತ್ನಿಸಿದರು.

ಠಾಣೆಯ ಸಬ್‌ ಇನ್‌ ಸ್ಪೆಕ್ಟರ್, ಸಹಾಯಕ ಸಬ್ ಇನ್‌ಸ್ಪೆಕ್ಟರ್‌ ಸೇರಿ ಆರು ಪೊಲೀಸರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಅಷ್ಟೂ ಜನರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಇಡೀ ಪ್ರಕರಣದ ಸಂಬಂಧ ತನಿಖೆ ನಡೆಸಿ ವರದಿ ನೀಡಲು ಡಿವೈಎಸ್‌ಪಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದ್ದಾರೆ.

ವಕೀಲರ ಸಂಘದಲ್ಲಿ ತುರ್ತು ಸಭೆ ನಡೆಸಿದ್ದು, ಆರೋಪಿತ ಪೊಲೀಸರನ್ನು ಬಂಧಿಸುವ ತನಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರತಿಭಟನೆ ತೀವ್ರಗೊಳ್ಳುವ ಮುನ್ಸೂಚನೆಯಿಂದ ನಗರದಲ್ಲಿ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular