ಕರ್ನಾಟಕ, ಜೂನ್, 14: ಕರ್ನಾಟಕ ರಾಜ್ಯಕ್ಕೆ ಈಗಾಗಲೇ ಮುಂಗಾರು ಮಳೆ ಪ್ರವೇಶ ನೀಡಿದೆ. ಈ ಹಿನ್ನೆಲೆ ಹಲವೆಡೆ ಅನ್ನದಾತರು ಬಿತ್ತನೆ ಕಾರ್ಯಕ್ಕೆ ಸಜ್ಜಾಗುತ್ತಿದ್ದಾರೆ. ಇನ್ನು ಕೆಲವೆಡೆ ಮಾತ್ರ ಮಳೆ ಇಲ್ಲದಂತಾಗಿದ್ದು, ಬಿಸಿಲಿನ ವಾತಾವರಣವೇ ಮುಂದುವರೆದಿದೆ. ಮುಂಗಾರು ಬಂದರೂ ಸಹ ಕೆಲವು ಪ್ರದೇಶಗಳಲ್ಲಿ ಬಿಸಿಲಿನ ಧಗೆ ಮಾತ್ರ ಕಡಿಮೆ ಆಗುತ್ತಿಲ್ಲ. ಮತ್ತೊಂದೆಡೆ ನೋಡುವುದಾದರೆ ಇಂದು ರಾಜ್ಯದ ಹಲವು ಭಾಗಗಗಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯಲಿದ್ದಾನೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ (ಜೂನ್ 13) ಬೆಳಗ್ಗೆ ಮೋಡ ಕವಿದ ವಾತಾವಾರಣ ನಿರ್ಮಾಣವಾಗಿತ್ತು. ಆದರೆ ಬೆಳಗ್ಗೆ 9 ಗಂಟೆ ಸುಮಾರಿಗೆ ಮತ್ತೆ ದೀಢೀರ್ ಬಿಸಿಲಿನ ವಾತಾವರಣ ನಿರ್ಮಾಣ ಆಗಿತ್ತು. ನಂತರ ಸಂಜೆ 5 ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಳೆ ಬರುವ ಎಲ್ಲಾ ಮುನ್ಸೂಚನೆಗಳು ಇದ್ದವು. ಆದರೆ ನಗರದ ಕೆಲವೆಡೆ ಮಾತ್ರ ಜಿನುಗು ಮಳೆಯಾಗಿದೆ ಅಷ್ಟೇ.
ಹಾಗೆಯೇ ಇಂದು (ಜೂನ್ 14) ನಗರದಲ್ಲಿ ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಮುಂದುವರೆದಿದ್ದು, ಸಂಜೆ ವೇಳೆಗೆ ಮಳೆಯಾಗಲಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅಲ್ಲದೆ ಸಿಲಿಕಾನ್ ಸಿಟಿ ಬೆಂಗಳೂರು, ಕರಾವಳಿ ಜಿಲ್ಲೆಗಳಲ್ಲಿ ಇಂದು ಕೂಡ ಭಾರೀ ಮಳೆ ಬೀಳುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ.
ರಾಜ್ಯದ ಹಲವು ಭಾಗಗಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗಿದ್ದು, ಜೂನ್ 14, ಜೂನ್ 15ರಂದು ಸಹ ಮಳೆ ಮುಂದುವರೆಯಲಿದೆ. ರಾಜ್ಯಕ್ಕೆ ಮುಂಗಾರು ಆಗಮನ ಆಗಿರುವ ಹಿನ್ನೆಲೆ ಕರಾವಳಿಯ ಬಹುತೇಕ ಜಿಲ್ಲೆಗಳು, ದಕ್ಷಿಣ ಒಳನಾಡಿನ ಕೆಲವು ಕಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಭಾರಿ ಮಳೆ ಬಿದ್ದಿದ್ದು, ಬೆಂಗಳೂರು ಸಮೀಪದ ಎಚ್‌ಎಎಲ್ ವಿಮಾನ ನಿಲ್ದಾಣದ ಬಳಿ ತುಂತುರು ಮಳೆ ಆಗಿದೆ ಎಂದು ತಿಳಿಸಿದೆ.