ಒಡಿಶಾದ ಕಿಯೋಂಜಾರ್ ಜಿಲ್ಲೆಯ NH-20 ನಲ್ಲಿ ಪ್ರಯಾಣಿಕರನ್ನು ತುಂಬಿದ್ದ ವ್ಯಾನ್ ನಿಂತಿದ್ದ ಟ್ರಕ್ ಗೆ ಡಿಕ್ಕಿಯಾದ ಪರಿಣಾಮ 8 ಜನರು ಸಾವನ್ನಪ್ಪಿದ್ದು, 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೊದಮರಿ ಗ್ರಾಮದ 20 ಮಂದಿ ಜಿಲ್ಲೆಯ ಮಾ ತಾರಿಣಿ ದೇವಸ್ಥಾನಕ್ಕೆ ವ್ಯಾನ್ ನಲ್ಲಿ ಹೋಗುತ್ತಿದ್ದಾಗ ಶುಕ್ರವಾರ (ಡಿಸೆಂಬರ್ 01) ಬೆಳಗ್ಗೆ ಅಪಘಾತ ಸಂಭವಿಸಿದ್ದು, ಮೃತರೆಲ್ಲರೂ ಗಂಜಾಂನ ದಿಗಪಹಂಡಿ ನಿವಾಸಿಗಳು.
ಈ ಪೈಕಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಘಾಟಗಾಂವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.
ಆರಂಭದಲ್ಲಿ ಗಾಯಾಳುಗಳನ್ನು ಘಾಟ್‌ಗಾಂವ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ನಂತರ ಕಟಕ್ ನ ಎಸ್ ಸಿಬಿ ವೈದ್ಯಕೀಯ ಕಾಲೇಜಿಗೆ ಉಲ್ಲೇಖಿಸಲಾಯಿತು.
ಮಾಹಿತಿ ಪಡೆದ ಬಲಿಜೋಡಿ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಅಪಘಾತದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಈ ಬಗ್ಗೆ ಕಿಯೋಂಜಾರ್ ಎಸ್ಪಿ ಕುಸಲ್ಕರ್ ನಿತಿನ್ ದಗುಡು ಮಾತನಾಡಿ, 20 ಮಂದಿ ತುಂಬಿದ್ದ ವ್ಯಾನ್ ಅತಿವೇಗದಲ್ಲಿ ಹೋಗುತ್ತಿದ್ದು, ಈ ವೇಳೆ ಟ್ರಕ್‌ಗೆ ಡಿಕ್ಕಿ ಹೊಡೆದಿದೆ, ಮಂಜು ಇದ್ದ ಕಾರಣ ವ್ಯಾನ್ ಅಪಘಾತಕ್ಕೆ ಈಡಾಗಿರಬಹುದು ಎಂದು ಅಂದಾಜಿಸಲಾಗಿದೆ.