
ಮಂಡ್ಯ: ಜಿಲ್ಲೆಯ ಕೆಲ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದಿರುವ ‘ಹೊಸ ಕಳೆ’ ನಿಧಾನವಾಗಿ ಹೊಲದಿಂದ ಹೊಲಕ್ಕೆ ಹಬ್ಬುತ್ತಾ, ನೀರಾವರಿ ಪ್ರದೇಶಗಳಿಗೂ ವ್ಯಾಪಿಸುವ ಆತಂಕ ಎದುರಾಗಿದೆ. ಮುಂಗಾರು ಪ್ರಾರಂಭವಾಗುತ್ತಿದ್ದಂತೆ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಕೆಲ ಕಾಲದ ವಿರಾಮದ ನಂತರ ರೈತರು ತಮ್ಮ ಹೊಲ-ಗದ್ದೆಗಳತ್ತ ಮುಖ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಹೊಸ ‘ಕಳೆ’ ಸ್ವಾಗತಿಸುತ್ತಿರುವುದು ಭೀತಿ ಮೂಡಿಸಿದೆ. ಹೊಲ-ಗದ್ದೆಗಳಲ್ಲಿ ಈಗಿರುವ ಕಳೆಯನ್ನು ತೆಗೆದು ಭೂಮಿಯನ್ನು ಹಸನಗೊಳಿಸಿ ಭತ್ತ, ಕಬ್ಬು, ರಾಗಿ ಸೇರಿದಂತೆ ದ್ವಿದಳ ಧಾನ್ಯಗಳ ಭಿತ್ತನೆಗೆ ಸಜ್ಜುಗೊಳಿಸಬೇಕು. ಇಂತಹ ಸಂದರ್ಭದಲ್ಲಿ ಜಮೀನಿನ ತುಂಬೆಲ್ಲಾ ಹೊಸ ಕಳೆ ಬೆಳೆದು ರೈತರನ್ನು ದಿಕ್ಕೆಡಿಸಿದೆ.
ಕಬ್ಬಿನ ಗದ್ದೆಯಲ್ಲಿ ಸಾಮಾನ್ಯವಾಗಿ ಕೊನ್ನಾರೆ, ಗರ್ಕೆ, ಮುರ್ಲೆ, ಕರಿಗಟ್ಟಿ ಹುಲ್ಲು, ಕಾಂಗ್ರೆಸ್ ಗಿಡ, ಮೈಸೂರು ಹೊನಗೊನೆ ಸೇರಿದಂತೆ ನೂರಾರು ಪ್ರಬೇಧದ ಕಳೆ ರೈತರಿಗೆ ತಲೆನೋವು ತರಿಸುತ್ತದೆ. ಇನ್ನು ಭತ್ತದಲ್ಲಿ ಜೊಂಡು, ಗಂಡುಭತ್ತ, ಒಡಕೆಬೀಜ ಏಸೇರಿದಂತೆ ಹಲವು ತಳಿಯ ಕಳೆಗಳು ರೈತರಿಗೆ ತೊಂದರೆ ನೀಡುತ್ತವೆ. ಇದರ ಜೊತೆಗೆ ಈಗ ಮತ್ತೊಂದು ಹೆಸರೇ ತಿಳಿಯದ ಕಳೆ ಮತ್ತಷ್ಟು ತಲೆಬೇನೆ ಉಂಟುಮಾಡಿದೆ.
ಕಬ್ಬಿನಲ್ಲಿ ಬೆಳೆಯುವ ಕಳೆಯನ್ನು ಮೂರು ತಿಂಗಳುಗಳ ಕಾಲ ತೆಗೆದು ಕಬ್ಬು ಬೆಳೆಯಲು ಅನುವು ಮಾಡಿಕೊಡಬೇಕು. ಭತ್ತದಲ್ಲಿ ಎರಡು ಬಾರಿ ಕಳೆ ತೆಗೆದು ಭತ್ತ ಸೊಗಸಾಗಿ ಬೆಳೆಯಲು ನಿಗಾ ವಹಿಸಬೇಕು. ಇಲ್ಲದಿದ್ದರೆ ಕಬ್ಬು ಮತ್ತು ಭತ್ತಕ್ಕಿಂತಲೂ ಹೆಚ್ಚಾಗಿ ಕಳೆಯದ್ದೇ ಆರ್ಭಟವಾಗಿ ಇಡೀ ಬೆಳೆಯನ್ನು ನುಂಗಿ ಹಾಕುತ್ತವೆ. ದ್ವಿದಳ ಧಾನ್ಯಗಳು ಬೆಳೆದಿರುವ ಹೊಲದಲ್ಲಿ ಹೊಸ ತಳಿಯ ಕಳೆ ರೈತರನ್ನು ಕಂಗೆಡಿಸಿದೆ. ಮೈಸೂರು ಹೊನಗೊನೆ ರೀತಿಯಲ್ಲಿ ಬರುವ ಈ ಕಳೆ ಬೆಳೆದಾಗ ಕಾಂಗ್ರೆಸ್ ಗಿಡದಂತೆ ಭಾಸವಾಗುತ್ತದೆ. ನಂತರ ಅದು ಹೂ ಬಿಟ್ಟು ಅದರ ಬೀಜಗಳು ಗಾಳಿ ಮತ್ತು ನೀರಿನಲ್ಲಿ ಸಾಗಿ ಮತ್ತಷ್ಟು ವಿಸ್ತಾರವಾಗುವ ಸಾಧ್ಯತೆಗಳಿವೆ.
ಇದರಿಂದ ಆತಂಕಗೊಂಡಿರುವ ರೈತರು ತಮ್ಮ ಹೊಲ ಗದ್ದೆಗಳಲ್ಲಿ ಬೆಳೆದಿರುವ ಕಳೆಯನ್ನು ಕಿತ್ತು ರಾಶಿ ಹಾಕಿ ಒಣಗಿಸಿ ಬೆಂಕಿಹಾಕಿ ಸುಟ್ಟುಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಇರುವ ಕೃಷಿ ಕೆಲಸದ ಜೊತೆಗೆ ಇದೊಂದು ಸೇರ್ಪಡೆಯಾಗಿದೆ ಎಂದು ಬೈದುಕೊಳ್ಳತ್ತಾ, ರೈತರು, ರೈತ ಮಹಿಳೆಯರು ತಮ್ಮ ಹೊಲ ಗದ್ದೆಗಳನ್ನು ಕಳೆಮುಕ್ತವಾಗಿಸಲು ಪ್ರಾಯಾಸ ಪಡುತ್ತಿದ್ದಾರೆ.
ಈ ಹೊಸ ಕಳೆ ಬೆಳೆಗೆ ತೊಂದರೆ ನೀಡುವುದು ಒಂದು ಕಡೆಯಾದರೆ, ಇದೇ ಕಳೆಯನ್ನು ರೈತರು ತಮ್ಮ ಹಸು ಕರುಗಳ ಮೇವಿನ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ತುಸು ಸಮಾಧಾನ ತಂದಿದೆ. ಸಾಮಾನ್ಯವಾಗಿ ಕಾಂಗ್ರೆಸ್ ಗಿಡ ಹೊರತುಪಡಿಸಿದಂತೆ ಉಳಿದ ಎಲ್ಲ ಕಳೆಯಯನ್ನು ಜಾನುವಾರುಗಳ ಮೇವಿಗೆ ಬಳಸಿಕೊಳ್ಳಬಹುದು. ಕೆಲವು ಮನುಷ್ಯರು ಸೊಪ್ಪಿನ ರೀತಿಯಲ್ಲಿ ತಿನ್ನುತ್ತಾರೆ. ಜಮೀನಿನಲ್ಲಿ ಕಳೆಯೇ ಹೆಚ್ಚಾದರೆ ಬೆಳೆಗೆ ತೊಂದರೆಯಾಗುವುದಲ್ಲದೆ, ಇಳುವರಿಯೂ ತಗ್ಗುತ್ತದೆ. ಇದು ರೈತರ ಆದಾಯಕ್ಕೆ ಕತ್ತರಿ ಬಿದ್ದಂತಾಗುತ್ತದೆ. ಬಹುತೇಕ ಕೃಷಿಕರು ತಮ್ಮ ಭತ್ತ ನಾಟಿಗೂ ಮುನ್ನ ಕಳೆ ನಾಶಕವನ್ನು ಸಿಂಪಡಿಸುತ್ತಾರೆ. ಭತ್ತದ ಪೈರು ಸ್ವಲ್ಪ ಬೆಳೆದ ನಂತರವೂ ಕಳೆ ನಾಶಕವನ್ನು ಸಿಂಪಡಿಸಿ ಬೆಳೆ ರಕ್ಷಣೆಗೆ ಮುಂದಾಗುತ್ತಾರೆ. ಕಳೆನಾಶಕ ಸಿಂಪಡಣೆಯಿಂದಾಗಿ ಭೂಮಿಯಲ್ಲಿರುವ ಸೂಕ್ಷ್ಮಾಣುಜೀವಿಗಳು ಸತ್ತುಹೋಗಿ ಬೆಳೆಗೆ ಸಿಗಬಹುದಾದ ಪೋಷಕಾಂಶ ಸಿಗದೆ ಮತ್ತಷ್ಟು ರೋಗಬಾಧೆಗೆ ಒಳಗಾಗಬಹುದು.
ಇದರಿಂದ ಕೆಲವರು ಕಳೆಕಿತ್ತು ಬೆಳೆ ರಕ್ಷಣೆ ಮಾಡುವುದು ಸಾಮಾನ್ಯವಾಗಿರುತ್ತದೆ. ಆದರೆ ಹೊಸ ಕಳೆಯಿಂದಾಗಿ ರೈತರಲ್ಲಿ ಆತಂಕ ಶುರುವಾಗಿದೆ. ಈ ಕಳೆ ಬೆಳೆದು ಹೂಬಿಡುವ ಮುನ್ನವೇ ನಾಶಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ದರೆ ಮತ್ತಷ್ಟು ವಿಸ್ತಾರವಾಗಿ ಹರಡುವ ಸಾಧ್ಯತೆಗಳಿವೆ.
ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ, ತೂಬಿನಕೆರೆ, ಕೋಡಿಶೆಟ್ಟಿಪುರ, ಹೊಸಕೊಪ್ಪಲು ಸುತ್ತಮುತ್ತ ಈ ಕಳೆ ಹರಡುತ್ತಿರುವುದು ರೈತರಲ್ಲಿ ಆತಂಕದ ಛಾಯೆ ಎದುರಾಗಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳು, ವಿಜ್ಞಾನಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸದಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದು ರೈತರ ಆತಂಕವಾಗಿದೆ. ‘ಹೊಸ ಕಳೆ ಹಬ್ಬುತ್ತಿರುವುದು ರೈತರಲ್ಲಿ ಆತಂಕ ಮನೆ ಮಾಡಿದೆ. ಇದು ವಿಸ್ತಾರವಾಗುವ ಮುನ್ನವೇ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಬೆಳೆಗೆ ಹಾನಿಯಾಗುವ ಸಾಧ್ಯತೆಗಳಿದ್ದು, ಕೃಷಿ ವಿಜ್ಞಾನಿಗಳು ಮುತುವರ್ಜಿ ವಹಿಸಿ ಪರಿಹಾರ ದೊರಕಿಸಿಕೊಡಬೇಕಾಗಿದೆ’ ಎಂದು ಉಮ್ಮಡಹಳ್ಳಿಯ ಪ್ರಗತಿಪರ ರೈತ ಯು.ಸಿ. ಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.
‘ಈ ರೀತಿಯ ಕಳೆ ನಾನು ಎಂದೂ ನೋಡಿರಲಿಲ್ಲ. ನಮ್ಮ ಹೊಲದ ತುಂಬೆಲ್ಲಾ ಬೆಳೆದಿದೆ. ಇದನ್ನು ಕಿತ್ತುಹಾಕುವುದೇ ದೊಡ್ಡ ಸಾಹಸವಾಗಿದೆ. ಬಿಟ್ಟರೆ ಮತ್ತಷ್ಟು ಬೆಳೆದು ನಮ್ಮ ಬಯಲನ್ನೇ ಆವರಿಸಿಕೊಳ್ಳುವ ಭೀತಿ ಎದುರಾಗಿದೆ’ ಎಂದು ರಾಗಿಮುದ್ದನಹಳ್ಳಿಯ ರೈತ ಬಸವರಾಜು ಹೇಳಿದ್ದಾರೆ. ಈ ಬಗ್ಗೆ ಕೃಷಿ ವಿಜ್ಞಾನಿ ಮಹೇಶ್ ಮಾತನಾಡಿದ್ದು, ‘ಹೊಸ ಕಳೆ ಬಗ್ಗೆ ನಮಗೆ ಇನ್ನೂ ಮಾಹಿತಿ ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರವೇ ಇದರ ಬಗ್ಗೆ ನಾವು ಹೇಳಬಹುದಾಗಿದೆ. ಕಳೆಗಳಲ್ಲೂ ನೂರಾರು ಪ್ರಬೇಧಗಳಿವೆ. ಇದು ಯಾವ ಪ್ರಬೇಧಕ್ಕೆ ಸೇರಿದೆ ಎಂಬುದನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಲಾಗುವುದು’ ಎಂದು ಹೇಳಿದರು.