Saturday, April 19, 2025
Google search engine

Homeರಾಜ್ಯಸುದ್ದಿಜಾಲಸರ್ಕಾರಿ ಕಚೇರಿಗಳಲ್ಲಿ ‘ವಿಕಲಚೇತನರ ಸ್ನೇಹಿ’ ವಾತಾವರಣ ನಿರ್ಮಿಸಿ: ಡಾ.ಮಂತರ್ ಗೌಡ

ಸರ್ಕಾರಿ ಕಚೇರಿಗಳಲ್ಲಿ ‘ವಿಕಲಚೇತನರ ಸ್ನೇಹಿ’ ವಾತಾವರಣ ನಿರ್ಮಿಸಿ: ಡಾ.ಮಂತರ್ ಗೌಡ

ಮಡಿಕೇರಿ : ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ‘ವಿಕಲಚೇತನರ ಸ್ನೇಹಿ’ ವಾತಾವರಣ ನಿರ್ಮಾಣ ಮಾಡಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಸಲಹೆ ಮಾಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಡಿಕೇರಿ ತಾಲ್ಲೂಕು ಪಂಚಾಯತ್, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್, ಕೊಡಗು ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ತಾ.ಪಂ.ಕಚೇರಿ ಹತ್ತಿರದ ಸಮಾಜ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಶನಿವಾರ ‘ವಿಶೇಷಚೇತನರ ಪುನರ್ವಸತಿ ಸಂಪನ್ಮೂಲ ಕೇಂದ್ರ’ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಕಚೇರಿಗಳಿಗೆ ವಿಕಲಚೇತನರು ಆಗಮಿಸಿದ ಸಂದರ್ಭದಲ್ಲಿ ವೀಲ್ ಚೇರ್ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು. ‘ಶಿಶುವಿನಲ್ಲಿಯೇ ಮಗುವಿಗೆ ಸರಿಯಾದ ಚಿಕಿತ್ಸೆ ನೀಡಿದರೆ ವಿಕಲತೆ ಹೋಗಲಾಡಿಸಬಹುದು. ಆ ನಿಟ್ಟಿನಲ್ಲಿ ಮಕ್ಕಳ ಚಟುವಟಿಕೆ ಗಮನಿಸಬೇಕು ಎಂದು ಶಾಸಕರು ನುಡಿದರು.’

ವಿಕಲಚೇತನರಿಗೆ ವೈಜ್ಞಾನಿಕವಾಗಿ ಪುನರ್ವಸತಿ ಕಲ್ಪಿಸಿದರೆ ಇತರರಂತೆ ಬದುಕು ನಡೆಸಬಹುದು. ಆ ನಿಟ್ಟಿನಲ್ಲಿ ವಿಕಲಚೇತನರು ಯಾವುದೇ ಕಾರಣಕ್ಕೂ ಎದೆಗುಂದದೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಶಾಸಕರು ಸಲಹೆ ನೀಡಿದರು. ಸರ್ಕಾರದಿಂದ ವಿಕಲಚೇತನರಿಗಾಗಿ ಹಲವು ಕಾರ್ಯಕ್ರಮಗಳಿದ್ದು, ಅವುಗಳನ್ನು ಬಳಸಿಕೊಳ್ಳಬೇಕು. ವಿಕಲಚೇತನ ಮಕ್ಕಳಿಗೆ ಸರಿಯಾದ ಶಿಕ್ಷಣ, ಉದ್ಯೋಗ ದೊರೆಯಬೇಕು. ವಿಕಲಚೇತನರಿಗಾಗಿ ಆರಂಭಿಸಿರುವ ಪುನರ್ವಸತಿ ಕೇಂದ್ರದ ಸೌಲಭ್ಯ ಬಳಸಿಕೊಳ್ಳಬೇಕು ಎಂದರು.‘ವಿಕಲಚೇತನ ಮಕ್ಕಳಿಗಾಗಿ ಉದ್ಯಾನವನ ಕಲ್ಪಿಸಿ, ಆಟದ ಚಟುವಟಿಕೆಗೆ ಅವಕಾಶ ಮಾಡಲಾಗುವುದು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾ.ಪಂ.ವ್ಯಾಪ್ತಿಯ ವಿಶೇಷಚೇತನರನ್ನು ವಾರಕ್ಕೊಮ್ಮೆಯಾದರೂ ಪುನರ್ವಸತಿ ಸಂಪನ್ಮೂಲ ಕೇಂದ್ರಕ್ಕೆ ಭೇಟಿ ನೀಡಲು ಅವಕಾಶ ಮಾಡಲಾಗುವುದು. ಇದರಿಂದ ವಿಕಲಚೇತನರ ಲವಲವಿಕೆ ಮತ್ತು ಕ್ರೀಯಾಶೀಲತೆಗೆ ಒತ್ತು ನೀಡಿದಂತಾಗುತ್ತದೆ ಎಂದು ಡಾ.ಮಂತರ್ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.’

ತಾ.ಪಂ.ಇಒ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರು ಮಾತನಾಡಿ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಸಹಕಾರದಲ್ಲಿ ವಿಶೇಷಚೇತನರಿಗೆ ನೇರವಾಗಿ ಸೌಲಭ್ಯ ಕಲ್ಪಿಸುವಲ್ಲಿ ಪ್ರಯತ್ನಿಸಲಾಗಿದೆ ಎಂದರು. ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಕಲಚೇತನರ ಅಧಿಕಾರಿ ವಿಮಲ ಅವರು ಮಾತನಾಡಿ ವಿಕಲತೆಯಲ್ಲಿ ದೈಹಿಕ ನ್ಯೂನತೆ, ಮೆದುಳು ವಾತ, ಕುಬ್ಜತೆ, ಸ್ನಾಯುಗಳ ದೌರ್ಬಲ್ಯ, ಅಂಧತ್ವ, ಮಂದ ದೃಷ್ಟಿ, ಕಿವುಡುತನ, ಮಂದ ಕಿವಿ, ಮಾತು ಅಥವಾ ಭಾಷಾ ವಿಕಲತೆ, ಬುದ್ದಿಮಾಂದ್ಯತೆ, ಆಸಿಡ್ ದಾಳಿಗೆ ತುತ್ತಾದವರು, ಕಲಿಕಾ ನ್ಯೂನತೆಗಳು, ಸ್ವಲೀನತೆ, ಮಾನಸಿಕ ಅಶ್ವಸ್ತತೆ, ಹಿಮೋಫೀಲಿಯಾ, ತಲಸೇಮಿಯಾ, ಸಿಕಲ್ ಸೆಲ್ ಕಾಯಿಲೆ, ಬಹು ಅಂಗಾಂಗ ಗಟ್ಟಿಯಾಗುವುದು, ಪಾರ್ಕಿನ್‍ಸನ್ ಖಾಯಿಲೆ, ಬಹುವಿಧ ವಿಕಲತೆ ಹೀಗೆ 21 ರೀತಿಯ ವಿಕಲತೆ ಕಾಣಬಹುದಾಗಿದೆ ಎಂದರು.

‘ವಿಕಲಚೇತನರಿಗೆ ಸರ್ಕಾರದಿಂದ ಸಾಧನೆ ಸಲಕರಣೆಗಳ ವಿತರಣೆ, ಬಸ್ ಪಾಸ್, ರೈಲ್ವೆ ಪಾಸ್ ಯೋಜನೆ, ಗುರುತಿನ ಚೀಟಿ, ವಿಶೇಷ ಚೇತನರೊಂದಿಗೆ ಸಾಮಾನ್ಯ ವ್ಯಕ್ತಿ ವಿವಾಹ, ವಿದ್ಯಾರ್ಥಿ ವೇತನ, ಆಧಾರ ಯೋಜನೆ, ವಿಮಾ ಯೋಜನೆ, ವೈದ್ಯಕೀಯ ಪರಿಹಾರ ನಿಧಿ, ಶುಲ್ಕ ಮರುಪಾವತಿ ಯೋಜನೆ, ಲ್ಯಾಪ್‍ಟಾಪ್ ವಿತರಣೆ, ಶಿಶು ಪಾಲನಾ ಭತ್ಯೆ, ಯಂತ್ರ ಚಾಲಿತ ತ್ರಿಚಕ್ರ ವಾಹನ ಯೋಜನೆ, ಸಾಧನೆ ಪ್ರತಿಭೆ, ಗ್ರಾಮೀಣ ಪುನರ್ ವಸತಿ ಯೋಜನೆ, ಅಂಗವಿಕಲರ ಮಕ್ಕಳ ಶಿಶು ಕೇಂದ್ರಿತ ಶೈಕ್ಷಣಿಕ ಯೋಜನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.’ ‘ಸರ್ಕಾರಿ ರಜಾ ದಿನ ಹೊರತುಪಡಿಸಿ ಉಳಿದಂತೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ವಿಶೇಷಚೇತನರ ಸಂಪನ್ಮೂಲ ಪುನರ್ವಸತಿ ಕೇಂದ್ರ ತೆರೆದಿರುತ್ತದೆ ಎಂದು ವಿಮಲ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.’

ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಕಾರ್ಯದರ್ಶಿ ಅಂಕಚಾರಿ ಅವರು ಆರೋಗ್ಯ ಸೇವೆ, ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ, ವಿಕಲಚೇತನರಿಗೆ ಸಾಧನ ಸಲಕರಣೆಗಳ ಬಗ್ಗೆ ಮಾಹಿತಿ, ವಿಶೇಷಚೇತನರಿಗೆ ಕೌಶಲ್ಯ ತರಬೇತಿ ಆಯೋಜಿಸುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ಪುನರ್ವಸತಿ ಕೇಂದ್ರದಲ್ಲಿ ನಡೆಸಲಾಗುತ್ತದೆ. ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಬಸವರಾಜು, ಜಿಲ್ಲಾ ವಿಶೇಷಚೇತನರ ಸಂಘದ ಅಧ್ಯಕ್ಷರಾದ ಜೆ.ಎ.ಮಹೇಶ್ವರ, ಪ್ರಮುಖರಾದ ಗಂಗಾಧರ, ವಿಕಲಚೇತನರ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular