ಚಾಮರಾಜನಗರ: ವಿದ್ಯಾರ್ಥಿಗಳು ಪಠ್ಯಗಳನ್ನು ಓದುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಸೂಸಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿಂದು ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವತಿಯಿಂದ ಏರ್ಪಡಿಸಿದ ಸಾಂಸ್ಕøತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್‍ಕ್ರಾಸ್ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಬರಿ ಪುಸ್ತಕಗಳನ್ನು ಓದುವುದಲ್ಲ. ಅದರೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಮಾನಸಿಕ ಧೈರ್ಯ, ಸ್ಥೈರ್ಯ ತುಂಬಲಿವೆ. ವಿದ್ಯಾರ್ಥಿಗಳ ನಡುವೆ ಸ್ನೇಹ ಬಾಂಧವ್ಯ ವೃದ್ಧಿಸಲು ಸಹಕಾರಿಯಾಗಲಿದೆ ಎಂದರು. ಪಟ್ಟಣದಲ್ಲಿ 2013ರಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆರಂಭವಾಯಿತು. ಮೊದಲು 33 ವಿದ್ಯಾರ್ಥಿಗಳಿದ್ದ ಕಾಲೇಜು ಇಂದು 500 ವಿದ್ಯಾರ್ಥಿಗಳನ್ನು ಹೊಂದಿದೆ. ಉತ್ತಮ ಶಿಕ್ಷಣ ನೀಡಿ ನ್ಯಾಕ್ ಬಿ ಶ್ರೇಣಿ ಮಾನ್ಯತೆ ಪಡೆದಿದೆ. ಇದು ಆರೋಗ್ಯಕರ ಬೆಳವಣಿಗೆ. ಕಾಲೇಜಿಗೆ ಸ್ವಂತ ಕಟ್ಟಡ ಇಲ್ಲವಾಗಿದ್ದು, ಮೂಲ ಸೌಲಭ್ಯಗಳೊಂದಿಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗುವುದು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಮುಖ್ಯ ಭಾಷಣ ಮಾಡಿದ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ವಿಜಯಕುಮಾರಿ ಎಸ್. ಕರಿಕಲ್ ಅವರು ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ನುಡಿಯಂತೆ ಮಹಿಳೆಯರಲ್ಲಿ ಜ್ಞಾನದ ದೀಪ ಹಚ್ಚುವ ಸಾಮಥ್ರ್ಯವಿದೆ. ಮಹಿಳೆಯರು ಇಂದು ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುನ್ನೆಡೆಯುತ್ತಿದ್ದಾರೆ. ಅವರಲ್ಲಿರುವ ಆತ್ಮವಿಶ್ವಾಸವೇ ಅದಕ್ಕೆ ಸಾಕ್ಷಿ ಎಂದರು. ವಿದ್ಯಾರ್ಥಿನಿಯರು ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ಅವರ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಸಾಮಥ್ರ್ಯ ಹೆಚ್ಚಾಗಲಿದೆ. ಮನಸ್ಸಿನ ಏಕಾಗ್ರತೆ ಹೆಚ್ಚಲಿದೆ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕ ವಾತಾವರಣ ಕಲ್ಪಿಸಲಿವೆ. ಪ್ರಾಪಂಚಿಕ ಜ್ಞಾನದ ಅರಿವಾಗಲಿದೆ. ಮಹಿಳೆಯರ ಅಭಿವೃದ್ಧಿ ದೇಶದ ಪ್ರಗತಿಗೆ ನೆರವಾಗಲಿದೆ ಎಂದು ವಿಜಯಕುಮಾರಿ ಎಸ್. ಕರಿಕಲ್ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ಆರ್. ಸುಮತಿ ಅವರು ಕಾಲೇಜು ನಡೆದು ಬಂದ ಹಾದಿ ಹಾಗೂ ನ್ಯಾಕ್ ಬಿ ಶ್ರೇಣಿ ಮಾನ್ಯತೆ ಪಡೆದಿರುವ ಬಗ್ಗೆ ಮಾತನಾಡಿದರು. ಸಮಾರಂಭದಲ್ಲಿ ರಾಜ್ಯಮಟ್ಟದ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿರುವ ಕಾಲೇಜಿನ ವಿದ್ಯಾರ್ಥಿನಿ ರೋಶಿಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಐಕ್ಯೂಎಸಿ ಸಮಿತಿ ಸಂಚಾಲಕ ಪಿ. ಬಾಲಸುಬ್ರಮಣ್ಯ, ಸಾಂಸ್ಕøತಿಕ ಸಮಿತಿಯ ಡಾ. ಎಂ.ಸಿ. ಪ್ರಭಾವತಿ, ಕ್ರೀಡಾ ಸಮಿತಿಯ ಡಾ. ಶಾಂತರಾಜು, ಸ್ಕೌಟ್ಸ್ ಮತ್ತು ಗೈಡ್ಸ್ ಸಮಿತಿಯ ಡಾ. ಎಚ್.ಎಸ್. ರುಕ್ಮಿಣಿ, ರಾಷ್ಟ್ರೀಯ ಸೇವಾ ಯೋಜನೆಯ ಎಸ್.ಆರ್. ದೀಪ, ರೆಡ್ ಕ್ರಾಸ್ ಸಮಿತಿ ಸಂಚಾಲಕ ಸಿದ್ದರಾಜು, ಇತರರು ಕಾರ್ಯಕ್ರಮದಲ್ಲಿ ಇದ್ದರು.