ತೆಲಂಗಾಣ: ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ನಗ ಬೀರುವ ಎಲ್ಲಾ ಸಾಧ್ಯತೆ ಹೆಚ್ಚಾಗಿದೆ. ೧೧೯ ಕ್ಷೇತ್ರಗಳ ಮತ ಎಣಿಕೆ ಪ್ರಾರಂಭವಾಗಿದ್ದು, ಕಾಂಗ್ರೆಸ್ ೬೩ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಗೆ ಭಾರಿ ಹಿನ್ನಡೆಯಾಗಿದ್ದು, ಇದುವರೆಗೂ ೨೯ ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಪಡೆದುಕೊಂಡಿದೆ.
ಚುನಾವಣೋತ್ತರ ಸಮೀಕ್ಷೆಗಳು ಕೂಡ ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಗುತ್ತದೆ ಎಂದು ಭವಿಷ್ಯ ನುಡಿದಿದ್ದವು. ಎಲ್ಲಾ ಸಮೀಕ್ಷೆಗಳು ಬೋಗಸ್, ರಾಜ್ಯದಲ್ಲಿ ನಾವೇ ಆಡಳಿತಕ್ಕೆ ಬರುತ್ತೇವೆ ಎಂದು ಬಿಆರ್‌ಎಸ್ ಮುಖಂಡರು ಹೇಳಿದ್ದರು. ಆದರೆ, ಮತ ಎಣಿಕೆ ಆರಂಭದಲ್ಲೇ ಸಮೀಕ್ಷೆಗಳು ನಿಜ ಎಂದು ಸಾಬೀತು ಮಾಡಿವೆ.
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಹ್ಯಾಟ್ರಿಕ್ ಗೆಲುವಿನ ಕನಸಿಗೆ ಕಾಂಗ್ರೆಸ್ ಅಡ್ಡಿಯಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಪಕ್ಕದ ಚುನಾವಣೆ ಮೇಲೂ ಪ್ರಭಾವ ಬೀರಿದೆ. ಬಿಜೆಪಿ ತೆಲಂಗಾಣದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಮೋದಿ, ಅಮಿತ್ ಶಾ ಭರ್ಜರಿ ಪ್ರಚಾರ ಮಾಡಿದರೂ, ಇಲ್ಲಿ ಬಿಜೆಪಿ ೫ ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎನ್ನಲಾಗಿದೆ.
ಕರ್ನಾಟಕದ ಸಚಿವರ ಪ್ರಚಾರ
ತೆಲಂಗಾಣದಲ್ಲಿ ಕಾಂಗ್ರೆಸ್‌ನಲ್ಲಿ ದೊಡ್ಡ ಹೆಸರು ಇಲ್ಲದ ಪರಿಣಾಮ ಕರ್ನಾಟಕದ ಬಹುಪಾಲು ಸಚಿವರು ಪ್ರಚಾರ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕೂಡ ತೆಲಂಗಾಣದಲ್ಲಿ ಅಬ್ಬರದ ಪ್ರಚಾರ ಮಾಡಿದ್ದರು. ಫಲಿತಾಂಶಕ್ಕೆ ಮುನ್ನವೇ ಕಾಂಗ್ರೆಸ್ ಸಂಭ್ರಮಾಚರಣೆ ಆರಂಭಿಸಿದೆ. ನಾಲ್ಕು ರಾಜ್ಯಗಳ ಮತ ಎಣಿಕೆಯಲ್ಲಿ ತೆಲಂಗಾಣ ಮತ್ತು ಚತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗುತ್ತಿದೆ. ಆದರೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಪಡೆದುಕೊಂಡಿದ್ದು, ಕಾಂಗ್ರೆಸ್ ಪೈಪೋಟಿ ನೀಡುತ್ತಿದೆ.