ಕೆ.ಆರ್.ನಗರ : ಬರಗಾಲ ಎದುರಾದಾಗ ಮತ್ತು ಕೋವಿಡ್ ನಂತಹ ಸಂದರ್ಭದಲ್ಲಿ ದೇಶ ಲಾಕ್‌ಡೌನ್ ಆದಾಗ ನೆಮ್ಮದಿ ಜೀವನ ನಡೆಸಲು ಸಹಕಾರಿಯಾಗಿದ್ದು ಹೈನುಗಾರಿಕೆ ಇದನ್ನು ಗ್ರಾಮೀಣ ಜನತೆ ಅರ್ಥ ಮಾಡಿಕೊಂಡು ಹೈನುಗಾರಿಕೆಗೆ ಒತ್ತು ನೀಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕು ಲಕ್ಷ್ಮಿ ಪುರ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಹೈನುಗಾರಿಕೆಗೆ ಸರ್ಕಾರ ಮತ್ತು ಹಾಲು ಒಕ್ಕೂಟದವರು ನೀಡುತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಹಳ್ಳಿಗಾಡಿನ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಕನಿಷ್ಠ ಒಂದು ಹಸುವನ್ನಾದರೂ ಸಾಕಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಶುಸಂಗೋಪನಾ ಇಲಾಖೆಯ ಸಚಿವರಾಗಿದ್ದಾಗ ರೈತರಿಗೆ ಮತ್ತು ಹೈನುಗಾರಿಕೆ ಮಾಡುವವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದರು ಇದರಿಂದ ಹಾಲು ಒಕ್ಕೂಟಗಳು ಸಾಕಷ್ಟು ವೃದ್ದಿಯಾಗಲು ಸಾಧ್ಯವಾಯಿತು ಎಂದ ಶಾಸಕರು ಗುಜರಾತ್‌ನ ಅಮೂಲ್‌ಗಿಂತಲೂ ಕೆಎಂಎಫ್ ಎಲ್ಲಾ ರೀತಿಯಲ್ಲೂ ಅಭಿವೃದ್ದಿಗೊಂಡಿದೆ ಇದಕ್ಕೆ ಸರ್ಕಾರವೇ ಕಾರಣ ಎಂದರು.
ಒಕ್ಕೂಟಕ್ಕೆ ಹೆಚ್ಚು ಹಾಲು ಸರಬರಾಜಾಗಿ ಉಳಿಯುತ್ತಿರುವ ಹಾಲು ಹಾಳಾಗಬಾರದು ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಹಾಲು ಮಹಾ ಮಂಡಳ ೨೦೧೪ರಲ್ಲಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದಾಗ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದ್ದರಿoದ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಉಪಯೋಗವಾಯಿತು ಇಂತಹಾ ಕೆಲಸಗಳನ್ನು ಮುಖ್ಯಮಂತ್ರಿಯಾದವರು ಮಾಡಬೇಕು ಎಂದು ಹೇಳಿದರು.
ಲಕ್ಷ್ಮಿಪುರ ಗ್ರಾಮವನ್ನು ಅಭಿವೃದ್ದಿ ಪಡಿಸುವ ಸಲುವಾಗಿ ಗ್ರಾಮ ವಿಕಾಸ್ ಯೋಜನೆಗೆ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ ಇದರ ಜತೆಗೆ ಗ್ರಾಮಕ್ಕೆ ಸಮುದಾಯ ಭವನ ನಿರ್ಮಾಣ ಮಾಡಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದ ಶಾಸಕ ಡಿ.ರವಿಶಂಕರ್ ಗ್ರಾಮಸ್ಥರ ಬೇಡಿಕೆಯಂತೆ ದೇವಾಲಯಗಳ ಜೀರ್ಣೋದ್ದಾರಕ್ಕೆ ಅಗತ್ಯ ಅನುದಾನ ಮಂಜೂರು ಮಾಡಿಸುವುದಾಗಿ ತಿಳಿಸಿದರು.
ಸಾಲಿಗ್ರಾಮ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿರುವ ಲಕ್ಷ್ಮಿಪುರ ಗ್ರಾಮಸ್ಥರು ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಲು ಹೆಚ್ಚು ಮತ ನೀಡುವ ಮೂಲಕ ನನಗೆ ಸಹಕಾರ ನೀಡಿದ್ದಾರೆ ಇದರ ಜತೆಗೆ ಎರಡು ವಿಧಾನ ಸಭಾ ಚುನಾವಣೆಗಳಲ್ಲೂ ಹೆಚ್ಚು ಮತ ನೀಡಿದ್ದಾರೆ ಇದನ್ನು ಮರೆಯಲು ಸಾಧ್ಯವಿಲ್ಲ ಎಂದರಲ್ಲದೆ ಗ್ರಾಮದ ಮುಖ್ಯ ರಸ್ತೆಗಳ ಡಾಂಬರೀಕರಣ ಮಾಡಿಸಲು ಬದ್ದನಾಗಿದ್ದು ಲಕ್ಷ್ಮಿಪುರ, ಚಿಕ್ಕನಾಯಕನಹಳ್ಳಿ ಮುಖ್ಯ ರಸ್ತೆಯ ಅಭಿವೃದ್ದಿಗಾಗಿ ೧ ಕೋಟಿ ರೂ ಮಂಜೂರು ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ ರಾಜ್ಯದ ಎಲ್ಲಾ ಒಕ್ಕೂಟಗಳಿಗಿಂತ ಮೈಮುಲ್ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹಾಲು ಸರಬರಾಜುದಾರರಿಗೆ ಹೆಚ್ಚು ಹಣ ನೀಡುವುದರ ಜತೆಗೆ ಅವರುಗಳ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯವನ್ನು ಆರಂಭಿಸಲಾಗಿದೆ ಎಂದರು.
ಈ ಬಾರಿ ಬರ ಇರುವುದರಿಂದ ಪಶು ಆಹಾರಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕು ಈ ಬಗ್ಗೆ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಲಾಗಿದ್ದು ಮುಖ್ಯಮಂತ್ರಿಗಳ ಆಪ್ತರಾಗಿರುವ ಶಾಸಕ ಡಿ.ರವಿಶಂಕರ್ ಈ ಕೆಲ ಸವನ್ನು ಮಾಡಿಸಿ ಕೊಡಬೇಕು ಇದರಿಂದ ಹೈನುಗಾರಿಕೆ ಮಾಡುವವರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಸಂಘದ ಅಧ್ಯಕ್ಷ ಕೆ.ಸುರೇಶ್, ತಾ.ಪಂ.ಮಾಜಿ ಸದಸ್ಯ ಎಲ್.ಎಂ.ಸಣ್ಣಪ್ಪ, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಟಿ.ಎನ್.ವಿಜಯಕುಮಾರ್, ನಿವೃತ್ತ ವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ಬಿಎಂಸಿ ವ್ಯವಸ್ಥಾಪಕ ಜಿ.ಎನ್.ಸಂತೋಷ್ ಮಾತನಾಡಿದರು. ಸಂಘಕ್ಕೆ ಗುಣಮಟ್ಟ ಮತ್ತು ಹೆಚ್ಚು ಹಾಲು ಸರಬರಾಜು ಮಾಡಿದವರಿಗೆ ಬಹುಮಾನ ವಿತರಿಸಲಾಯಿತು.
ಸಹಾಯಕ ವ್ಯವಸ್ಥಾಪಕ ಪ್ರವೀಣ್ ಪತ್ತಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಣಿಲಾಮಂಜುನಾಥ್, ಮಾಜಿ ಅಧ್ಯಕ್ಷ ಹುಚ್ಚೇಗೌಡ, ಸದಸ್ಯರಾದ ಪಾಪಣ್ಣ, ಕೃಷ್ಣೇಗೌಡ, ರೂಪ, ಕಾಳಮ್ಮ, ಸಂಘದ ಉಪಾಧ್ಯಕ್ಷ ಸ್ವಾಮಿ(ಎಂ.ಪಿ), ನಿರ್ದೇಶಕರಾದ ಡಿಷ್‌ಮಂಜು, ಎಲ್.ಎನ್.ಮಂಜಯ್ಯ, ಸಣ್ಣೇಗೌಡ, ನಾಗರಾಜು, ರೇವಣ್ಣ, ಪ್ರಕಾಶಾಚಾರ್, ರೇವಣ್ಣ, ಎಂ.ಅರುಣ, ಪ್ರತೀಮಾ, ಕಾರ್ಯದರ್ಶಿ ಕೃಷ್ಣೇಗೌಡ, ಸಿಬ್ಬಂದಿಗಳಾದ ಎಸ್.ಮಹೇಶ್, ಮಂಜುನಾಥ್ ಮತ್ತಿತರರು ಹಾಜರಿದ್ದರು.