ಮಂಡ್ಯ: ಮನ್ಮುಲ್ ರೈತರಿಂದ ಖರೀದಿಸುವ ಪ್ರತಿ ಲೀ ಹಾಲಿಗೆ 1.50 ರೂ. ಕಡಿತ ಮಾಡಿದೆ. ತೀವ್ರ ಬರಗಾಲದ ಪರಿಸ್ಥಿತಿಯಲ್ಲೂ ಮನ್ಮುಲ್ ಗಾಯದ ಮೇಲೆ ಬರೆ ಎಳೆದಿದ್ದು, ಉತ್ಪಾದಕರಿಗೆ ನೀಡುತ್ತಿದ್ದ ₹ 33.50ರ ಬದಲು ₹ 32 ರೂ ನಿಗದಿ ಮಾಡಿದೆ.
ಸರ್ಕಾರ ಒಪ್ಪದಿದ್ದರು ಹಾಲಿನ ದರ ಕಡಿತಗೊಳಿಸಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ಧಾರಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗಿದೆ.
ಮನ್ಮುಲ್ ನಿರ್ಧಾರಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದು, ಹಾಲಿನ ದರ ಕಡಿತ ಮಾಡಬಾರದಿತ್ತು ಮಾಡಿರುವುದು ತಪ್ಪು. ಸರ್ಕಾರ ದರ ಕಡಿತ ಒಪ್ಪಿಲ್ಲ. ಹಾಲಿನ ದರ ಕಡಿತಕ್ಕೆ ಸಿಎಂ, ಸಚಿವರು ಯಾರು ಕೂಡ ಒಪ್ಪಿಲ್ಲ. ಆದರೂ ಹಾಲಿನ ದರ ಕಡಿತ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹಾಲು ಹೆಚ್ಚು ಬರ್ತಿದೆ ಲಾಸ್ ಎಂದು ಒಕ್ಕೂಟಗಳು ಮಾಡಿದ್ದಾರೆ ಅಂತ ಇವರು ಸಹ ಮಾಡಿದ್ದಾರೆ. ಸದ್ಯದಲ್ಲೇ ಅದನ್ನ ಬದಲಾವಣೆ ಮಾಡಬೇಕು. ಮಾರುಕಟ್ಟೆಯಲ್ಲಿ 3 ರೂ ಜಾಸ್ತಿ ಮಾಡಿ ರೈತರಿಗೆ ನಮ್ಮ ಸರ್ಕಾರ ಬಂದ ತಕ್ಷಣವೇ 3 ರೂ ಕೊಟ್ಟಿದ್ದೇವೆ. ನೀವು 1.50ರೂ ಕಡಿಮೆ ಮಾಡಿದ್ರೆ ರೈತರು ಒಪ್ಪಲ್ಲ. ಒಕ್ಕೂಟಗಳ ಜೊತೆ ಸಭೆ ನಡೆಸಲಾಗುತ್ತದೆ. ಪಶು ಇಲಾಖೆ ಸಚಿವರ ಜೊತೆ ಮಾತನಾಡಿ ತಕ್ಷಣವೇ ದರ ಕಡಿತ ವಾಪಸ್ ಪಡೆಯುವಂತೆ ಸೂಚನೆ ಕೊಡ್ತೇನೆ ಎಂದು ಹೇಳಿದರು.