ವಿಜಯಪುರ: ನಗರದ ಕೈಗಾರಿಕಾ ಪ್ರದೇಶದ ರಾಜ್ ಗುರು ಫುಡ್ ಗೋದಾಮಿನ ಮೆಕ್ಕೆಜೋಳ ಸಂಸ್ಕರಣ ಘಟಕದಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ. ಮೃತರನ್ನು ಬಿಹಾರ ಮೂಲದ ಕಾರ್ಮಿಕರಾದ ರಾಜೇಶ್ ಮುಖಿಯಾ (೨೫), ರಾಮ್ರೀಜ್ ಮುಖಿಯಾ (೨೯), ಶಂಬು ಮುಖಿಯಾ (೨೬), ರಾಮ್ ಬಾಲಕ್ (೩೮), ಲೋಖಿ ಜಾಧವ್ (೫೬), ಕಿಶನ್ ಕುಮಾರ (೨೦), ದಾಲನಚಂದ ಮುಖಿನ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ಋಷಿಕೇಶ್ ಸೋನಾವಣೆ, ೮ ಜನ ಕಾರ್ಮಿಕರಲ್ಲಿ ೭ ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಎಲ್ಲರ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ನಿನ್ನೆ ಸಾಯಂಕಾಲದಿಂದ ಸತತ ೧೭ಗಂಟೆ ಕಾರ್ಯಾಚರಣೆ ನಡೆಸಲಾಗಿದೆ. ರಾಜಗುರು ಫುಡ್ ಮಾಲೀಕ, ಸೂಪರ್ವೈಸರ್ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಗೋದಾಮಿಗೆ ಸಚಿವ ಭೇಟಿ: ಸಚಿವ ಎಂಬಿ ಪಾಟೀಲ ಅವರು ವಿಜಯಪುರ ನಗರದ ಹೊರವಲಯದ ಕೈಗಾರಿಕೆ ಪ್ರದೇಶದಲ್ಲಿ ಕಾರ್ಮಿಕರು ಸಿಲುಕಿಕೊಂಡಿರುವ ರಾಜಗುರು ಮೆಕ್ಕೆಜೋಳ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯ ಪರಿಶೀಲನೆ ನಡೆಸಿದರು. ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನದಲ್ಲಿದ್ದ ಸಚಿವರು ಸುದ್ದಿ ತಿಳಿಯುತ್ತಿದ್ದಂತೆ ನಗರಕ್ಕೆ ದೌಡಾಯಿಸಿ ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೇ, ಕಾರ್ಮಿಕರನ್ನು ಭೇಟಿ ಸಾಂತ್ವನ ಹೇಳಿದರು.