ಮೈಸೂರು: ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲಿಸಾಕುದ್ರೂನು ಮೂಗ್ನಲ್ ಕನ್ನಡ ಪದವಾಡ್ತೀನಿ ಎನ್ನುತ್ತಲೇ ಎದೆ ತುಂಬ ಎಣೆ ಇಲ್ಲದ ಅಪಾರ ಕನ್ನಡ ಅಭಿ ಮಾನವನ್ನು ತುಂಬಿ ಕೊಂಡು ತಮ್ಮನ್ನು ತಾವು ಕನ್ನಡ ಪರಿಚಾರಕ ಎಂದು ಕರೆದು ಕೊಂಡು ಸಾಹಿತ್ಯದ ಮೂಲಕ ಅದರಲ್ಲೂ ಮುಖ್ಯವಾಗಿ ಶಿಶು ಸಾಹಿತ್ಯದಿಂದ ತಾವು ಬದುಕಿರುವ ತನಕವೂ ಕನ್ನಡದ ಜೊತೆಯಲ್ಲಿಯೇ ಜೀವಿಸಿದ್ದ ಜಿ.ಪಿ.ರಾಜರತ್ನಂ ಅವರು ಶಿಶು ಸಾಹಿತ್ಯದ ಗಾರುಡಿಗರೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಕೆ.ಆರ್.ಮೊಹಲ್ಲಾದ ನೂರಡಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನ ಸಂಯುಕ್ತವಾಗಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯದ ಧೈತ್ಯ ಪ್ರತಿಭೆ ಜಿ.ಪಿ.ರಾಜರತ್ನಂ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ, ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ, ಒಂದು ಎರಡು ಬಾಳೆಲೆ ಹರಡು ಮೂರು ನಾಲ್ಕು ಅನ್ನ ಹಾಕು ಪದ್ಯಗಳು ಸೇರಿದಂತೆ ರಾಜರತ್ನಂ ಅವರು ನೂರಾರು ಶಿಶು ಗೀತೆಗಳನ್ನು ಬರೆದು ಮಕ್ಕಳ ಮೊಗದಲ್ಲಿ ಕಿಲಕಿಲ ನಗುವನ್ನೂ, ಮನಸ್ಸಿನಲ್ಲಿ ಮನೋಲ್ಲಾಸವನ್ನೂ ತಂದವರು ಮಾತ್ರವಲ್ಲದೆ ಎಲ್ಲಾ ವಯೋಮಾನದವರ ಮನಸ್ಸನ್ನು ಅರಳಿಸುವಂತಹ ಸಾಹಿತ್ಯಬರೆದು ಕವಿ,ವಿಮರ್ಶಕ, ನಾಟಕಕಾರ,ಕಾದಂಬರಿಕಾರ, ಚಿಂತಕರಾಗಿ ಕನ್ನಡವನ್ನು ಕಟ್ಟಿ ಬೆಳೆಸಿದ ಕನ್ನಡದ ಕಟ್ಟಾಳಾಗಿದ್ದ ರೆಂದರು.
ಪದ್ಯಗಳಲ್ಲಿ ಗ್ರಾಮ್ಯ ಭಾಷೆ ಯನ್ನು ರಾಜರತ್ನಂ ಅವರಷ್ಟು ಸೊಗಸಾಗಿ ಬಳಸಿಕೊಂಡು ಕಾವ್ಯ ಕೃಷಿ ಮಾಡಿದವರು ಮತ್ತೊಬ್ಬರಿಲ್ಲ. ಟಿ.ಪಿ.ಕೈಲಾಸಂ ಅವರು ಗ್ರಾಮ್ಯ ಭಾಷೆಯನ್ನು ನಾಟಕಗಳಲ್ಲಿ ತಂದರೆ ರಾಜ ರತ್ನಂ ಅವರು ಕಾವ್ಯಕ್ಕೆ ತಂದು ಕನ್ನಡ ಸಾರಸ್ವತ ಲೋಕದಲ್ಲಿ ‘ರತ್ನನ್ ಪರ್ಪಂಚ ‘ ಸೃಷ್ಠಿ ಮಾಡಿದರು. ರಾಜರತ್ನಂರವರೇ ಹೇಳಿರುವಂತೆ ಯೇಳ್ ಕಳಿಕ್ ಒಂದ್ ಊರು ತಲೆ ಮೇಲೊಂದ್ ಸೂರು ಮಲಗೋಕ್ ಕ್ಕೆ ಬೂಮ್ ತಾಯಿ ಮಂಚ ಎಂಬಂತೆ ಬಡತನದಲ್ಲಿ ಹುಟ್ಟಿ ಬಡತನದಲ್ಲಿಯೇ ಬೆಳೆದು ವಿದ್ಯಾಭ್ಯಾಸಕ್ಕಾಗಿ ಪಡಬಾರದ ಪಾಡು ಪಟ್ಟು ಸಾಂಸಾರಿಕ ಜೀವನದ ಕಷ್ಟಗಳ ನಡುವೆಯೇ ಆಶಾವಾದಿತ್ವ ಸಾರುವ ರತ್ನನ ಪದಗಳನ್ನು ರಚಿಸಿದ ರಾಜರತ್ನಂ ಅಕ್ಷರಶಃ ಚಿರಕಾಲ ಪಳಪಳನೆ ಹೊಳೆಯುವ ಕನ್ನಡದ ರಾಜರತ್ನರಾಗಿದ್ದಾರೆ. ಇವರು ವಿದ್ಯಾರ್ಥಿಯಾಗಿದ್ದಾಗಲೇ ಬೇಂದ್ರೆಯವರಂತೆ ಗ್ರಾಮೀಣ ಸೊಗಡಿನ ಸ್ಪರ್ಶದೊಂದಿಗೆ ರಚಿಸಿದ ‘ಯೆಂಡ್ಕುಡ್ಕ ರತ್ನ’ ಇವತ್ತಿಗೂ ನಾಡಿನಲ್ಲಿ ಮೊಳಗುತ್ತಲೇ ಇದೆ.ಹಾಗಾಗಿ ರತ್ನನ್ ಪರ್ಪಂಚದ ಪದಗೊಳ್ ಗೆ ಯಾವತ್ತೂ ಸಾವಿಲ್ಲ. ಕನ್ನಡ ಇರುವ ತನಕವೂ ಅವು ಇದ್ದೇ ಇರುತ್ತವೆ ಎಂದು ಬನ್ನೂರು ರಾಜು ಹೇಳಿದರು.
ಗಣ್ಯರಿಂದ ಜಿ.ಪಿ.ರಾಜರತ್ನಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ಕುರಿತು ಸಂಕ್ಷಿಪ್ತವಾಗಿ ತಿಳಿಸಿ ಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮಅವರು ಅದ್ಯಕ್ಷೀಯ ಭಾಷಣ ಮಾಡುವುದರ ಜೊತೆಗೆ ರಾಜ ರತ್ನಂ ಅವರ ಕನ್ನಡ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿ ರಾಜರತ್ನಂ ಅವರ ಬದುಕು, ಬರಹ, ಸಾಧನೆ, ಸಿದ್ಧಿ ಯ ಬಗ್ಗೆ ತಿಳಿಸಿ ಕೊಟ್ಟರು. ಮುಖ್ಯ ಶಿಕ್ಷಕಿ ಸಯಿದಾ ನುರಾನಿ ಜಬೀನ್, ಶಿಕ್ಷಕಿಯರಾದ ಆಯಿಷಾ ಸುಲ್ತಾನ, ಆರ್.ಶೀಲಾ ಹಾಗು ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಎಸ್.ಜಿ.ಸೀತಾರಾಮ್, ಮುಕ್ತಕ ಕವಿ ಮುತ್ತುಸ್ವಾಮಿ, ಚಿತ್ರಕಲಾ ಶಿಕ್ಷಕ ಮನೋಹರ್ ಮುಂತಾದವರು ಭಾಗವಹಿಸಿದ್ದರು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.