ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಹರದನಹಳ್ಳಿ ಉಪ ವಿಭಾಗದಲ್ಲಿ ಇಂದು ನಡೆದ ಜನ ಸಂಪರ್ಕ ಸಭೆಯಲ್ಲಿ ಗ್ರಾಹಕರು ತಮಗೆ ಉಂಟಾಗಿರುವ ವಿದ್ಯುತ್ ಸಮಸ್ಯೆಗಳ ಬಗ್ಗೆ ಚಾಮರಾಜನಗರ ಹಾಗೂ ಕೊಡಗು ವೃತ್ತದ ಅಧೀಕ್ಷಕ ಇಂಜಿನೀಯರ್ ಎಂ.ಕೆ. ಸೋಮಶೇಖರ್ ಅವರಿಗೆ ದೂರು ನೀಡಿದರು.
ಹರವೆ ಗ್ರಾಮದ ಮಂಜುನಾಥ್ ಎಂಬುವರು ಮಾತನಾಡಿ, ತಮಗೆ ಸೇರಿದ ಕ್ರಷರ್ ಇದ್ದು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ, ಸಂಜೆ ವೇಳೆ ಕರೆಂಟ್ ಹೋದರೆ ಬೆಳಿಗಿನವರೆವಿಗೂ ಸರಬರಾಜು ಆಗುತ್ತಿಲ್ಲ, ಇದರಿಂದ ತೊಂದರೆ ಉಂಟಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧೀಕ್ಷಕ ಇಂಜಿನೀಯರ್ ಕೂಡಲೇ ಕ್ರಮ ವಹಿಸಬೇಕೆಂದು ಶಾಖಾ ಇಂಜನೀಯರ್‌ಗೆ ಸೂಚಿಸಿದರು. ಅಟ್ಟುಗುಳಿಪುರ ಗ್ರಾಮದ ತಂಗವೇಲು ಅವರು ಮಾತನಾಡಿ ನಾನು ಕ್ರಯಕ್ಕೆ ಪಡೆದಿರುವ ಮನೆಗೆ ಭಾಗ್ಯಜ್ಯೋತಿ ಕಲ್ಪಿಸಲಾಗಿದ್ದು, ಈಗ ನನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು ಅನೇಕ ಭಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ದೂರಿಗೆ ಉತ್ತರಿಸಿದ ಅಧೀಕ್ಷಕ ಇಂಜಿನೀಯರ್ ಸರ್ಕಾರ ಗೃಹಜ್ಯೋತಿ ಜಾರಿಗೆ ತಂದಿದ್ದು ಹಾಲಿ ಇರುವ ಸಂಪರ್ಕ ಕಡಿತಗೊಳಿಸಿ ಹೊಸ ಸಂಪರ್ಕ ಪಡೆಯುವಂತೆ ಸಲಹೆ ನೀಡಿದರು. ಮುತ್ತುರಾಜು ಮಾತನಾಡಿ ವಿದ್ಯುತ್ ಕಂಬಗಳನ್ನು ಸೂಕ್ತ ರೀತಿಯಲ್ಲಿ ಅಳವಡಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ದೃಪದ್, ಹರದನಹಳ್ಳಿ ಶಾಖಾಧಿಕಾರಿಗಳಾದ ಎನ್. ವಸಂತ್ ಕುಮಾರ್, ನವೀನ್, ಸತೀಶ್, ಕಂದಾಯ ಹಿರಿಯ ಸಹಾಯಕ ಮಹದೇವಸ್ವಾಮಿ ಇತರರು ಇದ್ದರು.