ಬೆಳಗಾವಿ : ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಮಳೆ ಇಲ್ಲದೆ ರೈತರು ಬೆಳೆದ ಬೆಳೆಗಳೆಲ್ಲ ಸಂಪೂರ್ಣ ಹಾಳಾಗಿವೆ. ರೈತರು ಸಕಾಲಕ್ಕೆ ಸಾಲ ಮರು ಪಾವತಿ ಮಾಡಲು ಅಸಾಧ್ಯವಾದ ಕಾರಣ ಸಾಲ ವಸೂಲಿಯನ್ನು ೨೦೨೫ ಜನವರಿ ತನಕ ಮುಂದೂಡುವಂತೆ ಶಾಸಕ ಜಿ.ಟಿ.ದೇವೇಗೌಡ ಸರ್ಕಾರಕ್ಕೆ ಮನವಿ ಮಾಡಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿಂದು ನಡೆದ ಬರಗಾಲದ ಚರ್ಚೆಯಲ್ಲಿ ಮಾತಾಡಿದ ಅವರು, ಸಾಲ ಮರುಪಾವತಿ ಮಾಡದಿದ್ದಲ್ಲಿ ವರ್ಷದ ಪೂರ್ತಿ ಬಡ್ಡಿಯನ್ನು ರೈತರೇ ಕಟ್ಟಬೇಕಿದೆ. ಬರಗಾಲ ಹಿನ್ನೆಲೆ ಬೆಳೆ ಇಲ್ಲದ ಕಾರಣ ಸಾಲ ಮರುಪಾವತಿ ಅಸಾಧ್ಯವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಿದೆ.ಇದನ್ನು ತಡೆಯಲು ರೈತರ ಸಾಲವನ್ನು ಮನ್ನಾ ಮಾಡಿ, ಅಥವಾ ೨೦೨೫ ರ ಜನವರಿ ವರೆಗೆ ಸಾಲದ ಮರು ಪಾವತಿಯನ್ನು ವಿಸ್ತರಿಸಿ ಜತೆಗೆ ಒಂದು ವರ್ಷದ ಬಡ್ಡಿಯನ್ನು ಸರ್ಕಾರವೇ ತುಂಬುವಂತೆ ಜಿಟಿಡಿ ಸರ್ಕಾರವನ್ನು ಆಗ್ರಹಿಸಿದರು. ಜೂನ್ ಕೊನೆ ವಾರದಲ್ಲಿ ಸ್ವಲ್ಪ ಮಳೆ ಬಂತು. ಉತ್ತರ ಕರ್ನಾಟಕ ಭಾಗದ ರೈತರು ತೊಗರಿ, ಹೆಸರು, ಉದ್ದು, ಹಲಸಂದೆ ಬಿತ್ತನೆ ಮಾಡಿದರು, ಬಿತ್ತನೆ ಸಮಯಕ್ಕೆ ಬೇಕಾದ ಬಿತ್ತನೆ ಬೀಜ, ಗೊಬ್ಬರವನ್ನು ಸರ್ಕಾರ ನೀಡಲಿಲ್ಲ, ಜತೆಗೆ ಮಳೆಯೂ ಬಾರದೆ ಮೊಳಕೆ ಬಂದು ಎಲ್ಲಾ ಬೆಳೆಗಳು ಸಂಪೂರ್ಣ ನಾಶವಾಯಿತು. ಸರ್ಕಾರದ ಯಾವ ಸಚಿವರು ಕೂಡ ರೈತರ ಜಮೀನುಗಳಿಗೆ ತೆರಳಿ ಬೆಳೆ ನಾಶವಾದ ಬಗ್ಗೆ ವಿಚಾರಿಸಲಿಲ್ಲ. ರೈತರಿಗೆ ಆತ್ಮಸ್ಥೈರ್ಯದ ಮಾತುಗಳಾಡಲಿಲ್ಲ. ನಿಮ್ಮ ಗಮನ ಏನಿದ್ದರೂ ಐದು ಗ್ಯಾರಂಟಿಗಳಿಗೆ ಹಣ ಹೊಂದಿಸುವುದು ಮತ್ತು ಪಂಚಾರಾಜ್ಯ ಚುನಾವಣೆ ಕಡೆ ಗಮನ ಕೊಟ್ಟು ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಕಿಸಾನ್ ಸಮ್ಮಾನ್ ಯೋಜನೆಯ ೪ ಸಾವಿರ ರೂ. ಕೊಡುವುದನ್ನು ನಿಲ್ಲಿಸಿದಿರಿ, ಮೊದಲ್ಲಿದ್ದ ಸರ್ಕಾರಗಳು ಬರ ಪರಿಹಾರ ಎಂದು ಖರ್ಚು ಮಾಡಿ ಆಮೇಲೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರು, ಆದರೆ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ. ಕೇಂದ್ರ ಸರ್ಕಾರ ಕೊಡಲಿಲ್ಲ ಎಂದು ದೂರುತ್ತಿರಿ, ಬಾಯಿಗೆ ಬಂದಂಗೆ ಮಾತಾಡುತ್ತೀರಿ ಇವೆಲ್ಲವನ್ನೂ ನೋಡಿ ಅವರು ಹೇಗೆ ತಾನೇ ಸಹಾಯ ಮಾಡುತ್ತಾರೆ. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಜೊತೆ ಉತ್ತಮ ಬಾಂಧವ್ಯ, ಒಡನಾಟ ಇಟ್ಟುಕೊಂಡರೆ ಅವರು ಸಹಾಯ ಮಾಡುತ್ತಾರೆ. ಇನ್ನಾದರೂ ರಾಜ್ಯದ ರೈತರ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರದ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲದ ಮಿತಿಯನ್ನು ೩ ಲಕ್ಷದಿಂದ ೫ ಲಕ್ಷಕ್ಕೆ ಏರಿಸಿದೆ. ಆದರೆ ಇದುವರೆಗೂ ಅದು ಜಾರಿಗೆ ಬಂದಿಲ್ಲ. ರೈತರಿಗೆ ೩ ರಿಂದ ೪ ಘಂಟೆಯೂ ಕರೆಂಟ್ ನೀಡುತ್ತಿಲ್ಲ. ನನ್ನ ಕ್ಷೇತ್ರದ ಚಿಕ್ಕಾನ್ಯ, ದೊಡ್ಡಕನ್ಯಾ, ದೂರ ಮತ್ತು ಎಡಹಳ್ಳಿ ಗ್ರಾಮಗಳ ಭಾಗಗಳಲ್ಲಿ ಹುಲಿ, ಚಿರತೆಗಳ ಹಾವಳಿ ಇದೆ. ಆ ಭಾಗದ ಜನರು ನಮಗೆ ಬೇರೆ ಏನು ಬೇಡ ಕರೆಂಟ್ ಕೊಡಿ ರಾತ್ರಿ ತಿರುಗಾಡುವುದಕ್ಕೆ ಕಷ್ಟ ಆಗುತ್ತಿದೆ ಎನ್ನುತ್ತಿದ್ದಾರೆ ಎಂದು ಜಿಟಿಡಿ ಸದನಕ್ಕೆ ತಿಳಿಸಿದರು