ಬೆಂಗಳೂರು : ಕರ್ನಾಟಕ ವಿಧಾನಸಭೆಗೆ ಹೆಚ್ಚು ಹಾಜರಾತಿ ಮತ್ತು ನಿಗದಿತ ಸಮಯದಲ್ಲಿ ವಿಧಾನಸಭೆಗೆ ಹಾಜರಿದ್ದ ಕಾರಣ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ತಮ್ಮ ಕಚೇರಿಯಲ್ಲಿ ಬಹುಮಾನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ನಾನು ಪ್ರತಿಯೊಂದು ಕಲಾಪದಲ್ಲಿಯೂ ಭಾಗವಹಿಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ, ಈ ಕರ್ತವ್ಯ ಪಾಲನೆಯಿಂದ ನನಗೆ ಪ್ರಥಮ ಸ್ಥಾನದ ಬಹುಮಾನ ಲಭ್ಯವಾಗಿದ್ದು ಈ ಬಹುಮಾನವನ್ನು ನನ್ನ ಕ್ಷೇತ್ರದ ಜನರಿಗೆ ಅರ್ಪಿಸುತ್ತೇನೆ ಎಂದರು. ನನ್ನ ತಂದೆಯನ್ನು ಸದನದ ಸಿಂಹ ಎಂದು ನಮ್ಮ ಕ್ಷೇತ್ರದಲ್ಲಿ ಹಲವಾರು ಜನ ಪ್ರೀತಿಯಿಂದ ಕರೆಯುತ್ತಾರೆ, ಸದನದಲ್ಲಿ ನಾನು ಸಹ ಅವರ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತೇನೆ, ಸದನದಲ್ಲಿ ನನಗೆ ಸಿಗುವ ಸಮಯದಲ್ಲಿ ನನ್ನ ಕ್ಷೇತ್ರ ಹಾಗೂ ರಾಜ್ಯದ ರೈತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.