ಚಾಮರಾಜನಗರ : ಜಿಲ್ಲೆಯಲ್ಲಿ ಇದೇ ತಿಂಗಳ ೨೭ರಿಂದ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ ಹಮ್ಮಿಕೊಂಡಿದ್ದು, ಅಭಿಯಾನದ ಯಶಸ್ಸಿಗೆ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕುಷ್ಠರೋಗ ನಿರ್ಮೂಲನೆ ಕುರಿತ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಪಡಿಸುವ ಸಲುವಾಗಿ ನಡೆದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕುಷ್ಠರೋಗವು ಲೆಪ್ರೆ ಎಂಬ ಮೈಕ್ರೋ ಬ್ಯಾಕ್ಟೀರಿಯಾದಿಂದ ಬರಲಿದೆ. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಕುಷ್ಠರೋಗದ ಸಂಪೂರ್ಣ ನಿಯಂತ್ರಣಕ್ಕಾಗಿ ಡಿಸೆಂಬರ್ ೨೭ರಿಂದ ೨೦೨೪ರ ಜನವರಿ ೧೧ರವರೆಗೆ ಕುಷ್ಠರೋಗ ಪ್ರಕರಣಗಳನ್ನು ಪತ್ತೆಹಚ್ಚುವ ಅಭಿಯಾನ ಕಾರ್ಯವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ.
ಈ ನಿಟ್ಟಿನಲ್ಲಿ ಜನರಲ್ಲಿ ಕುಷ್ಠರೋಗದ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಿ, ಸಂಬಂಧಪಟ್ಟ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಭಿಯಾನದ ಯಶಸ್ವಿಗೆ ಸಹಕರಿಸಬೇಕು. ಅಭಿಯಾನ ಅಂಗವಾಗಿ ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಆಶಾ ಕಾರ್ಯಕರ್ತೆಯರು ಹಾಗೂ ಒಬ್ಬರು ಪುರುಷ ಸ್ವಯಂ ಸೇವಕರು ಗ್ರಾಮದ ಪ್ರತಿ ಮನೆಮನೆಗೂ ಭೇಟಿ ನೀಡಿ ಕುಷ್ಠರೋಗ ಪತ್ತೆಹಚ್ಚುವ ಬಗ್ಗೆ ಮಾಹಿತಿ ನೀಡಬೇಕು. ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಕುಷ್ಠರೋಗದ ಪ್ರಾರಂಭಿಕ ಚಿಹ್ನೆಗಳಿರುವುದನ್ನು ಖಚಿತಪಡಿಸಿಕೊಂಡು ವ್ಯಕ್ತಿಯ ಚರ್ಮದಲ್ಲಿ ಯಾವುದೇ ಬಗೆಯ ಮಚ್ಚೆ ಕಂಡುಬಂದರೂ ಅಂತಹವರಿಗೆ ಸಂಬಂಧಿಸಿದ ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಕೊಡಿಸಲಾಗುವುದು ಎಂದರು.
ಕುಷ್ಠರೋಗದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿ ರೋಗ ನಿರ್ಮೂಲನೆ ಕುರಿತು ಬ್ಯಾನರ್, ಭಿತ್ತಿಪತ್ರ, ಕರಪತ್ರಗಳನ್ನು ಹಂಚಬೇಕು. ಜನಜಾಗೃತಿ ಕುರಿತ ಬೀದಿನಾಟಕಗಳನ್ನು ಏರ್ಪಡಿಸಬೇಕು. ಕುಷ್ಠರೋಗ ತಪಾಸಣೆ ಮಾಡುವ ತಂಡಗಳ ಮೇಲ್ವಿಚಾರಣೆಯನ್ನು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ವಹಿಸಲಿದ್ದಾರೆ. ಇದಕ್ಕಾಗಿ ಆಯಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ಸಹಕರಿಸಬೇಕು. ಅಭಿಯಾನದ ಅವಧಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಿಗೆ ಭೇಟಿ ವಿದ್ಯಾರ್ಥಿಗಳಿಗೆ ರೋಗದ ಬಗ್ಗೆ ತಿಳಿಹೇಳಬೇಕು. ಅಲ್ಲದೆ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ, ಸೋಲಿಗರು ವಾಸಿಸುವ ಪೋಡುಗಳಲ್ಲಿನ ಜನರನ್ನು ತಪಾಸಣೆಗೊಳಪಡಿಸಬೇಕು. ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳನ್ನು ಪರೀಕ್ಷಿಸಬೇಕು. ಒಟ್ಟಿನಲ್ಲಿ ಜಿಲ್ಲೆಯನ್ನು ಕುಷ್ಠರೋಗ ಮುಕ್ತ ಜಿಲ್ಲೆಯಾನ್ನಾಗಿಸಲು ಎಲ್ಲರು ಪಣತೋಡಬೇಕು ಎಂದು ಅವರು ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಾನಿವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಕುಷ್ಠರೋಗ ಪ್ರಕರಣಗಳನ್ನು ಪತ್ತೆಹಚ್ಚುವ ಅಭಿಯಾನದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನೋಡೆಲ್ ಅಧಿಕಾರಿ ಡಾ. ಮಹೇಶ್, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ರಾಜೇಶ್‌ಕುಮಾರ್ ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ವಿವಿಧ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.