ಸರಗೂರು: ಎಸ್. ಎಸ್.ಫೌಂಡೇಶನ್ ಇವರ ಸಹಾಯದೊಂದಿಗೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಬುಡಕಟ್ಟು ಜನಾಂಗದವರಿಗಾಗಿ ಸರಗೂರಿನ ನಡಾಡಿ ಹಾಡಿಯಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಭಾನುವಾರ ಲೋಕಾರ್ಪಣೆ ಮಾಡಲಾಗಿದೆ.
ಬುಡಕಟ್ಟು ಜನಾಂಗದವರಿಗಾಗಿ ನಿರ್ಮಿಸಿದ ಇದು ಒಂಬತ್ತನೇ ದೇವಸ್ಥಾನವಾಗಿದ್ದು, ಇನ್ನು ಹಲವಾರು ಹಾಡಿಗಳಲ್ಲಿ ದೇವಸ್ಥಾನವನ್ನು ನಿರ್ಮಿಸುವ ಗುರಿಯನ್ನು ಇಟ್ಟುಕೊಂಡಿದೆ.

ವಿಶೇಷವಾಗಿ ಬುಡಕಟ್ಟು ಜನಾಂಗದ ಸಂಪ್ರದಾಯ ಪರಂಪರೆಯಲ್ಲಿ ಬಂದಂತಹ ಅವರ ಧಾರ್ಮಿಕ ನಂಬಿಕೆಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಅವರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವ ಕಾರಣ ದೇವಸ್ಥಾನ ಇಲ್ಲದಿರುವ ಹಾಡಿಗಳಲ್ಲಿ ಸಣ್ಣ ಸಣ್ಣ ದೇವಸ್ಥಾನಗಳನ್ನು ನಿರ್ಮಿಸಿ ಕೊಡುವುದು ಸಂಸ್ಥೆಯ ಉದ್ದೇಶವಾಗಿದೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ಗಂಗಾ ಪೂಜೆ ಗಣಪತಿ ಅವನ ಮತ್ತು ವಿವಿಧ ದೇವರ ಪ್ರತಿಷ್ಠಾಪನೆ ವಿಧಿವತ್ತಾಗಿ ನಡೆಯಿತು. ಬಳಿಕ ಸಂಕೀರ್ತನಾ ಯಾತ್ರೆ ನಡೆಯಿತು.

ಅದಾದನಂತರ ಧಾರ್ಮಿಕ ಸಭೆಯು ನಡೆದಿದ್ದು, ದೇವಸ್ಥಾನದ ಮುಖ್ಯ ಪೂಜಾರಿ (ಗುಡ್ಡಪ್ಪ) ಅತಿಥಿಗಳನ್ನು ಸ್ವಾಗತಿಸಿದರು. ಮಂಡ್ಯ ಜಿಲ್ಲೆಯ ನಿವೃತ್ತ ಎಸ್.ಪಿ ಬಲರಾಮೇಗೌಡ್ರು ಅಧ್ಯಕ್ಷತೆಯನ್ನು ವಹಿಸಿ ಹಾಡಿಯ ಜನರು ಎಲ್ಲರೂ ಕೂಡ ಒಂದಾಗಿ ನಮ್ಮ ಧಾರ್ಮಿಕ ಆಚಾರ ವಿಚಾರಗಳನ್ನು ಉಳಿಸಿಕೊಳ್ಳಬೇಕು. ಯಾವುದೇ ಸಂಸ್ಥೆಗಳು ನೀಡಿರುವ ಆಸೆ ಆಮಿಷಗಳಿಗೆ ಬಲಿಯಾಗದೆ ನಮ್ಮ ಧಾರ್ಮಿಕ ನಂಬಿಕೆಗಳನ್ನು ಬಿಡದೆ ನಮ್ಮ ಸಂಸ್ಕೃತಿಯನ್ನು ಗಟ್ಟಿಗೊಳಿಸಬೇಕು ಎಂದರು.

ಎಸ್ ಎಸ್ ಫೌಂಡೇಶನ್ ಅಧ್ಯಕ್ಷರಾದಂತಹ ಸೂರ್ಯನಾರಾಯಣ್ ರವರು ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಪರಿಚಯಿಸುತ್ತಾ ಕಳೆದ ನಾಲ್ಕು ವರ್ಷಗಳಿಂದ ನಮ್ಮ ಸಂಸ್ಥೆಯು ಬುಡಕಟ್ಟು ಜನಾಂಗದವರಿಗೆ ಈವರೆಗೂ ಮಾಡಿರುವ ಸೇವಾ ಕಾರ್ಯಗಳನ್ನು ವಿಸ್ತಾರವಾಗಿ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಮಹದೇವಪ್ಪ ಅವರು ಮತ್ತು ತಾಲೂಕು ಕಾರ್ಯದರ್ಶಿ ಪ್ರಶಾಂತ್ ವಿಶ್ವ ಹಿಂದೂ ಪರಿಷತ್ ಹಿರಿಯರಾದ ಶ್ರೀಧರ ಜಿ ಉಪಸ್ಥಿತಿ ಇದ್ದರು.
