Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ:ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಮಲೆಮಹದೇಶ್ವರ ದೇವಾಲಯದಲ್ಲಿ ೫೩ನೇ ವರ್ಷದ ಉತ್ಸವ

ಕೆ.ಆರ್.ನಗರ:ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಮಲೆಮಹದೇಶ್ವರ ದೇವಾಲಯದಲ್ಲಿ ೫೩ನೇ ವರ್ಷದ ಉತ್ಸವ

ಕೆ.ಆರ್.ನಗರ: ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಶ್ರೀ ಮಲೆಮಹದೇಶ್ವರ ದೇವಾಲಯದಲ್ಲಿ ೫೩ನೇ ವರ್ಷದ ಉತ್ಸವವನ್ನು ಅತ್ಯಂತ ವಿಜೃಂಭಣೆಯಿoದ ನಡೆಸಲಾಯಿತು.
ಶಾಸಕ ಡಿ.ರವಿಶಂಕರ್, ಗಣೇಶ್‌ಪ್ರಸಾದ್, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜಶ್ರೀಗಳು, ಮಲೆಮಹದೇಶ್ವರ ಸ್ವಾಮಿ ಉತ್ಸವ ಸಮಿತಿ ಅಧ್ಯಕ್ಷ ಆರ್.ಹೆಚ್.ನಟರಾಜು ಅವರುಗಳು ಬೆಳಗ್ಗೆ ೧೦ಗಂಟೆಗೆ ದೇವಾಲಯದ ಮುಂದೆ ಉತ್ಸವಕ್ಕೆ ಚಾಲನೆ ನೀಡಿದರು.
ಆನಂತರ ಮುತ್ತಿನ ಪಲ್ಲಕ್ಕಿಯಲ್ಲಿ ಮಲೆಮಹದೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಹೊತ್ತ ವಾಹನವು ಬಸವೇಶ್ವರ ಬಡಾವಣೆಯ ಮೂಲಕ ದಾಟಿ ಹಾಸನ-ಮೈಸೂರು ರಸ್ತೆ, ವಿವಿ ರಸ್ತೆ, ಬಜಾರ್ ರಸ್ತೆಯಲ್ಲಿ ಹಾದು ೭ನೇ ರಸ್ತೆಯ ಮೂಲಕ ಮತ್ತೆ ದೇವಾಲಯದ ಆವರಣ ತಲುಪಿತು.
ಈ ಸಂದರ್ಭದಲ್ಲಿ ಡೊಳ್ಳುಕುಣಿತ, ವೀರಭದ್ರನಕುಣಿತ, ಕಂಸಾಳೆ, ಕೀಲುಕುಣಿತ, ಚಿಲಿಪಿಲಿ ಗೊಂಬೆಗಳ ಪ್ರದರ್ಶನ, ನಗಾರಿ, ತಮಟೆ, ಪೂಜಾಕುಣಿತ, ಜಂಡೆಮೇಳ, ನಂದಿಧ್ವಜ, ಮಂಗಳವಾದ್ಯ ಸೇರಿದಂತೆ ಇತರ ಜಾನಪದ ಕಲಾತಂಡಗಳು ಮತ್ತು ಯುವಕರ ಕುಣಿತ ಉತ್ಸವಕ್ಕೆ ಮೆರಗು ನೀಡಿದವು.
ಮೆರವಣಿಗೆ ಸಾಗುವ ರಸ್ತೆಯಲ್ಲಿ ಭಕ್ತರು ಪ್ರಸಾದ ಮತ್ತು ಮಜ್ಜಿಗೆ ಪಾನಕದ ವ್ಯವಸ್ಥೆ ಮಾಡಿದರಲ್ಲದೆ ರಸ್ತೆಯ ತುಂಬೆಲ್ಲಾ ರಂಗೋಲಿ ಬಿಡಿಸಿ ತಳಿರು ತೋರಣ ಹಾಕಿ ಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಜಯಕಾರದ ಘೋಷಣೆಗಳನ್ನು ಮೊಳಗಿಸಿದರು. ಪಟ್ಟಣದ ಸೇರಿದಂತೆ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ವಿವಿಧ ಭಾಗಗಳಿಂದ ಹತ್ತಾರು ಸಾವಿರ ಮಂದಿ ಬಂದು ಉತ್ಸವಮೂರ್ತಿ ಮತ್ತು ದೇವರ ದರ್ಶನ ಪಡೆದರು.
ಕಾರ್ತಿಕ ಸೋಮವಾರದ ಅಂಗವಾಗಿ ಮಲೆಮಹದೇಶ್ವರ ದೇವಾಲಯದ ಗರ್ಭ ಗುಡಿಯಲ್ಲಿ ಹೂವಿನ ಅಲಂಕಾರ ಮಾಡಲಾಯಿತ್ತಲ್ಲದೆ ದೇವರಿಗೆ ವಿಶೇಷ ಪೂಜೆ ಮತ್ತು ಪುರಸ್ಕಾರ ನೆರವೇರಿಸಿ ಮಹಾಮಂಗಳಾರತಿ ಮಾಡಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಸಂಜೆ ದೇವಾಲಯದ ಪಕ್ಕದಲ್ಲಿರುವ ದೇವೀರಮ್ಮನವರ ಶಿಶುವಿಹಾರದ ಆವರಣದಲ್ಲಿ ಕೊಂಡೋತ್ಸವ ನಡೆಸಿ ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಜಂಗಮ ಮಠದ ಚಂದ್ರಶೇಖರಶಿವಾಚಾರ್ಯ ಮಹಾಸ್ವಾಮೀಗಳ ಪಾದಪೂಜೆ ನೆರವೇರಿಸಿ ಸಾಲುಪಂಕ್ತಿ ಅನ್ನದಾಸೋಹ ಮಾಡಲಾಯಿತು.
ಜಿ.ಪಂ. ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಉತ್ಸವ ಸಮಿತಿ ಉಪಾಧ್ಯಕ್ಷ ಕೆಂಪಣ್ಣ, ಕಾರ್ಯದರ್ಶಿ ಎಸ್‌ವಿಎಸ್‌ಸುರೇಶ್, ಖಜಾಂಚಿ ಅರುಣ್.ವಿ.ನರಗುಂದ್, ಟ್ರಸ್ಟಿಗಳಾದ ಶಂಕರ್, ಪ್ರಶಾಂತ್, ಮಾದೇಶ್, ಲೋಕೇಶ್, ಎ.ಎಸ್.ಗಣೇಶ್, ಮಲೆ ಮಹದೇಶ್ವರಸ್ವಾಮಿ ಯುವಸೇನೆ ಅಧ್ಯಕ್ಷ ಬೋಜರಾಜು,ಶಾಸಕ ಡಿ.ರವಿಶಂಕರ್ ಪತ್ನಿ ಸುನೀತಾ, ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು, ಪುರಸಭೆ ಸದಸ್ಯರಾದ ಮಂಜುಳಚಿಕ್ಕವೀರು, ಕೆ.ಪಿ.ಪ್ರಭುಶಂಕರ್, ನಟರಾಜು, ಮಾಜಿ ಸದಸ್ಯ ರಾಜಾಶ್ರೀಕಾಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular