ಮಂಡ್ಯ: ನಿಖಿಲ್ ಅವರೇ ಮಂಡ್ಯದ ಅಭ್ಯರ್ಥಿ ಆಗಬೇಕು. ಒಂದು ವೇಳೆ ನಿಖಿಲ್ ಬಾರದೇ ಇದ್ದರೆ ನಾನೂ ಒಬ್ಬ ಆಕಾಂಕ್ಷಿ ಎಂದು ಜೆಡಿಎಸ್ ಮಾಜಿ ಶಾಸಕ ಸುರೇಶ್ ಗೌಡ ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಚುನಾವಣೆಗೆ ನಿಲ್ಲಬೇಕು ಎಂಬುದು ಎಲ್ಲರ ಒಕ್ಕೊರಲ ಅಭಿಪ್ರಾಯ. ಕುಮಾರಸ್ವಾಮಿ ಅವರು ಅವರ ನಿರ್ಧಾರವನ್ನು ಪುನರ್ ವಿಮರ್ಶಿಸಬೇಕು. ಪಾಪಾ ನಿಖಿಲ್ ಅವರು ಕಡಿಮೆ ಅಂತರಿಂದ ಕಳೆದ ಬಾರಿ ಸೋತಿದ್ದಾರೆ.ರಾಮನಗರದಲ್ಲೂ ಷಡ್ಯಂತ್ರಗಳಿಂದ ನಿಖಿಲ್ ಸೋತಿದ್ದಾರೆ.ನಮಗೆ ಕೃತಜ್ಞತೆ ಇದೆ ಅವರೇ ನಿಲ್ಲಬೇಕು ಎಂಬುದು ಎಲ್ಲರ ಒತ್ತಾಯ. ಈ ಬಗ್ಗೆ ವರಿಷ್ಠರ ಗಮನಕ್ಕೂ ತರಲಾಗಿದೆ, ಅವರು ನಿರ್ಧಾರ ಮಾಡಬೇಕು ಎಂದು ಹೇಳಿದರು.
ನಿಖಿಲ್ ಅವರೇ ಮಂಡ್ಯದ ಅಭ್ಯರ್ಥಿ ಆಗಬೇಕು. ನಿಖಿಲ್ ಬಾರದೇ ಇದ್ದರೆ ನಾನೂ ಒಬ್ಬ ಆಕಾಂಕ್ಷಿ.ಇದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ಮೊದಲ ಆದ್ಯತೆ ನಿಖಿಲ್ ಕುಮಾರಸ್ವಾಮಿಗೆ ಕೊಡಬೇಕು. ಬಿಜೆಪಿ, ಜೆಡಿಎಸ್ ನಡುವೆ ಕ್ಷೇತ್ರ ಹೊಂದಾಣಿಕೆಯಾಗಿ ನಮಗೆ ಬಿಟ್ಟುಕೊಟ್ರೆ ನಾವು ಕ್ಲೈಮ್ ಮಾಡ್ತಿವಿ. ಎಲ್ಲೆಲ್ಲಿ ಜೆಡಿಎಸ್ ಸ್ಟ್ರಾಂಗ್ ಇದ್ದಾರೆ ಅದರ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
ನಾನು ಅಭ್ಯರ್ಥಿಯಾಗಿ ನನ್ನ ವಿರುದ್ಧ ಸಚಿವ ಚಲುವರಾಯಸ್ವಾಮಿ ನಿಂತರೆ ಒಳ್ಳೇದು. ಪಾಪಾ ಅವರ ಆಡಳಿತವನ್ನ ಜನ ಒಪ್ಪಿಕೊಂಡಿದ್ದಾರೆ.ಜಿಲ್ಲೆಯಲ್ಲಿ ಅಭಿವೃದ್ದಿ ಅನ್ನೋದು ಯುದ್ಧೋಪಾದಿಯಲ್ಲಿ ನಡೀತಿದೆ. ಅವರಿಗಿಂತ ಜಿಲ್ಲೆಯಲ್ಲಿ ಸಮರ್ಥ ನಾಯಕರಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿದಿರೋದೇ ಅವರಿಂದ. ನನಗೆ ಅವರ ವಿರುದ್ಧ ನಿಂತುಕೊಳ್ಳಬೇಕು ಎಂಬುದು ಆಸೆ ಎಂದು ಹೇಳಿದರು.
ಜನ ನನ್ನ ಮತ್ತೆ ತಿರಸ್ಕಾರ ಮಾಡಿದ್ರೆ ರಾಜಕೀಯವಾಗಿ ಒಂದು ನಿರ್ಧಾರ ತಗೋಬಹುದು. ಚಲುವರಾಯಸ್ವಾಮಿ ನನ್ನ ವಿರುದ್ಧ ಸ್ಪರ್ಧಿಸಲಿ ಸೋತರೆ ರಾಜಕೀಯಕ್ಕೆ ಅಂತ್ಯ ಹಾಡುತ್ತೇನೆ ಎಂದು ಸಚಿವ ಚಲುವರಾಯಸ್ವಾಮಿಗೆ ಸುರೇಶ್ ಗೌಡ ಸವಾಲ್ ಹಾಕಿದ್ದಾರೆ.