ಮಂಗಳೂರು(ದಕ್ಷಿಣ ಕನ್ನಡ): ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಸಂದೇಶ ಹಾಕಿದ ಹಿನ್ನೆಲೆಯಲ್ಲಿ ಮಂಗಳೂರು ನಗರದ ಉರ್ವ ಠಾಣೆಯ ಪೊಲೀಸರು ಎಸ್ ಡಿಪಿಐ ಮುಖಂಡ ರಿಯಾಝ್ ಕಡಂಬು ಅವರನ್ನ ಬಂಧಿಸಿ ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ.
ಅವಹೇಳನಕಾರಿ ಸಂದೇಶ ಹಾಕಿದ ಹಿನ್ನೆಲೆಯಲ್ಲಿ ಮಂಗಳೂರು ಸೈಬರ್, ಇಕಾನಾಮಿಕ್ ಹಾಗೂ ನಾರ್ಕೋಟಿಕ್ಸ್ (ಸೆನ್) ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದಾಖಲಿಸಿಕೊಂಡಿದ್ದರು. ರಿಯಾಝ್ ನಗರದ ಫ್ಲಾಟ್ ವೊಂದರಲ್ಲಿ ವಾಸವಾಗಿದ್ದು, ಅಲ್ಲಿಂದ ಉರ್ವ ಪೊಲೀಸರು ಬಂಧಿಸಿದ್ದರು.
ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಸಂದೇಶ ಹಾಕಿದ ಆರೋಪದಡಿ ಮಂಗಳೂರು ಸೆನ್ ಠಾಣೆಯಲ್ಲಿ ಪೊಲೀಸರು ಮಂಗಳವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಮುಹಮ್ಮದ್ ರಿಯಾಝ್ ಎಂಬ ಫೇಸ್ ಬುಕ್ ನಲ್ಲಿ ಖಾತೆ ಹೊಂದಿರುವ ವ್ಯಕ್ತಿಯು ಡಿ.10ರಂದು ಸ್ಪೀಕರ್ ಯು.ಟಿ.ಖಾದರ್ ರ ಭಾವಚಿತ್ರವನ್ನು ಎಡಿಟ್ ಮಾಡಿ ಸಾವರ್ಕರ್ ಹಾಕಿರುವ ಟೋಪಿಯನ್ನು ಹಾಕಿ “ನಾನು ಸಾವರ್ಕರ್ ಅಭಿಮಾನಿ ಖಾದರ್ಕರ್” ಎಂಬುದಾಗಿ ಹಾಗೂ “ಆತ ಬ್ರಿಟಿಷರೊಂದಿಗೆ ಕ್ಷಮಾಪಣಾ ಪತ್ರ ಬರೆದರೆ ಈತ ಸಂಘಿಗಳೆದುರು ಮಂಡಿಯೂರಿದ ಸಭಾಧ್ಯಕ್ಷ…” ಎಂಬುದಾಗಿ ಹಾಕಿದ್ದಾರೆ ಎಂದು ಸ್ವಯಂ ಪ್ರೇರಿತ ದೂರಿನಲ್ಲಿ ತಿಳಿಸಲಾಗಿತ್ತು.