ಬೆಂಗಳೂರು: ಯುವತಿಯೊಬ್ಬಳು ಜೊಮ್ಯಾಟೊ ಮೂಲಕ ಆಹಾರ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದರು. ಆದರೆ ಜೊಮ್ಯಾಟೊ ಡೆಲಿವರಿ ಬಾಯ್ ತಡವಾಗಿ ಆಹಾರವನ್ನು ತಂದಿದ್ದ, ಯಾಕೆ ಇಷ್ಟು ಲೇಟ್ ಆಯ್ತು ಎಂದು ಕೇಳಿದ್ದಕ್ಕೆ ಯುವತಿಯ ಮೇಲೆ ಹಲ್ಲೆ ನಡೆಸಿ ಮೂಗು ಮುರಿದಿದ್ದಾನೆ.
ನಗರದ ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜ್ ಎಂಬಾತ ಹಿತೇಶಾ ಚಂದ್ರಾಣಿ ಎಂಬ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಯುವತಿಯು ಮಧ್ಯಾಹ್ನ 3.30ರ ವೇಳೆಗೆ ಆಹಾರ ಆರ್ಡರ್ ಮಾಡಿದ್ದಾರೆ, ಆಪ್ ಲೆಕ್ಕಾಚಾರದಂತೆ 4.30ರ ವೇಳೆಗೆ ಆಹಾರ ತಲುಪಬೇಕಿತ್ತು. ಆದರೆ ನಿಗದಿ ಸಮಯಕ್ಕೆ ಆಹಾರ ತಲುಪಲಿಲ್ಲ. ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗೆ ಕರೆ ಮಾಡಿ ಆಗಿರುವ ತೊಂದರೆ ಹೇಳಿಕೊಂಡಿದ್ದಾರೆ. ಆರ್ಡರ್ ಕ್ಯಾನ್ಸಲ್ ಮಾಡುವ ಮೊದಲು ಡೆಲಿವರಿ ಬಾಯ್ ಬಂದಿದ್ದಾನೆ, ಮೊದಲೇ ಸಿಟ್ಟಿನಲ್ಲಿದ್ದ ಯುವತಿ ಜೊಮ್ಯಾಟೊ ಟೀಂ ಜತೆ ಮಾತನಾಡಿದ್ದೇನೆ, ಈಗ ನನಗೆ ಯಾವುದೇ ಖರ್ಚಿಲ್ಲದೆ ಊಟ ಕೊಡುತ್ತೀರಾ, ನಿಮ್ಮ ಕಡೆಯವರಿಂದ ಉತ್ತರ ಬರುವವರೆಗೂ ಕಾದು ನಿಲ್ಲಲು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ಆಗ ಡೆಲಿವರಿ ಬಾಯ್ ನಾನೇನು ನಿಮ್ಮ ಮನೆ ಆಳು ಎಂದುಕೊಂಡಿದ್ದೀರಾ, ಎಂದು ಕೂಗಾಡಿದ್ದಾನೆ, ಭಯದಿಂದ ಆಕೆ ಬಾಗಿಲು ಮುಚ್ಚಲು ಮುಂದಾದಾಗ ಮನೆಯೊಳಗೆ ಬಂದು ಟೇಬಲ್ ಮೇಲಿಟ್ಟದ್ದ ಆಹಾರ ಪೊಟ್ಟಣವನ್ನು ವಾಪಸ್ ಪಡೆದು ಆಕೆಯ ಮೂಗಿಗೆ ಗುದ್ದಿ ಹೊರಟುಹೋಗಿದ್ದಾನೆ.
ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ, ಆಕೆಯ ಮೂಗಿನ ಮೂಳೆ ಮುರಿದಿದ್ದು, ಸರ್ಜರಿ ಮಾಡಿಸಿಕೊಳ್ಳಬೇಕಿದೆ, ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.