ಮದ್ದೂರು: ಮದ್ದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಉಪ ವಿಭಾಗ ಅಧಿಕಾರಿಗಳಾದ ಶಿವಮೂರ್ತಿ ರವರ ಅಧ್ಯಕ್ಷತೆಯಲ್ಲಿ ಗಣಿ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳ ಗಣಿ ಸಂರಕ್ಷಣಾ ಸಮಿತಿಯ ಸಭೆಯನ್ನ ಏರ್ಪಡಿಸಲಾಗಿತ್ತು.
ಈ ವೇಳೆ ಮಾತನಾಡಿದ ಎಸಿ ಶಿವಮೂರ್ತಿ, ಶಿಂಷಾ ನದಿ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಕೂಡ ನಿರಂತರವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಂದು ತಂಡವಾಗಿ ರಚನೆಗೊಂಡು ಅಕ್ರಮವಾಗಿ ಮರಳು ತೆಗೆಯುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೋಟಿಸ್ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಕ್ರಮವಾಗಿ ಸಂಗ್ರಹ ಮಾಡಿರುವ ಮರಳನ್ನ ವಶಪಡಿಸಿಕೊಂಡು ಸರ್ಕಾರಿ ಇಲಾಖೆಗಳ ಕೆಲಸಕ್ಕೆ ಅಥವಾ ಖಾಸಗಿ ಸಂಸ್ಥೆಗಳ ಕಾಮಗಾರಿಗೆ ಬಳಸಲಾಗುತ್ತದೆ. ಸಾರ್ವಜನಿಕರು ಕೂಡ ಮನೆ ಕಟ್ಟುವ ಉದ್ದೇಶವಿದ್ದರೆ ಅಗತ್ಯ ದಾಖಲಾತಿಗಳನ್ನು ನೀಡಿ ಮರಳನ್ನ ಸಂಬಂಧ ಪಟ್ಟ ಇಲಾಖೆಯಿಂದ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಎತ್ತಿನಗಾಡಿಯಲ್ಲೂ ಮರಳು ಸಾಗಿಸುವುದನ್ನ ನಿಷೇಧಿಸಲಾಗಿದ್ದು, ಖಾಲಿ ಗಾಡಿಗೆ 5000 ದಂಡ ಮರಳು ತುಂಬಿದ ಎತ್ತಿನಗಾಡಿಗೆ ಟನ್ ಗೆ 3 ಸಾವಿರ ದಂಡ ವಿಧಿಸಲಾಗುತ್ತದೆ ಎಂದರು.
ಈ ವೇಳೆ ತಹಸಿಲ್ದಾರ್ ಸೋಮಶೇಖರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮಹೇಶ್, ಸಿಪಿಐ ವೆಂಕಟೇಗೌಡ, ಶಿವಕುಮಾರ್, ಆರ್ ಎಫ್ ಓ ಗವಿಸಿದ್ದಯ್ಯ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.